`ಈ ಸಲ ಕಪ್ ನಮ್ಮದಾಗ್ಲಿ’ ಅಂತಾ ಹರಕೆ ಕಟ್ಟಿಕೊಂಡ `ಆರ್ ಸಿಬಿಯನ್’
ಚಿತ್ರದುರ್ಗ : ರಾಯಲ್ ಚಾಲೆಂಜರ್ಸ್ ಬೆಂಗಳೂರು ( ಆರ್ ಸಿಬಿ) ಇದು ಕೇವಲ ತಂಡದ ಹೆಸರಲ್ಲ… ಕೋಟ್ಯಂತರ ಅಭಿಮಾನಿಗಳ ಉಸಿರು.. ಐಪಿಎಲ್ ನಲ್ಲಿ ನತದೃಷ್ಟ ತಂಡ ಎಂದೇ ಬಿಂಬಿತವಾಗಿದ್ದರೂ ಅಭಿಮಾನಿಗಳ ವಿಚಾರದಲ್ಲಿ ಅದೃಷ್ಠವಂತ ತಂಡ.
ಐಪಿಎಲ್ ನಲ್ಲಿ ಬೇರೆ ಯಾವುದೇ ತಂಡಕ್ಕೆ ಇಲ್ಲದ ಹುಚ್ಚು ಅಭಿಮಾನಿಗಳು ಆರ್ ಸಿಬಿಗೆ ಇದ್ದಾರೆ. ಪ್ರತಿ ಬಾರಿ ಈ ಸಲ ಕಪ್ ನಮ್ದೆ… ಕಪ್ ನಮ್ದೆ ಅಂತಾ ಅಭಿಮಾನಿಗಳು ತಂಡವನ್ನ ಪ್ರೋತ್ಸಾಹಿಸುತ್ತಾರೆ. ಆದ್ರೆ ಅಭಿಮಾನಿಗಳ ನಿರೀಕ್ಷೆಯನ್ನ ಪ್ರತಿ ಬಾರಿ ಹುಸಿಗೊಳಿಸುತ್ತಾ ಬಂದಿದೆ.
3 ಬಾರಿ ಫೈನಲ್ ಪ್ರವೇಶಿಸಿ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಆದರೆ ಆಭಿಮಾನಿಗಳು ಮಾತ್ರ ಪ್ರತಿ ಐಪಿಎಲ್ ಆರಂಭವಾದಾಗಲೂ ‘ಈ ಸಲ ಕಪ್ ನಮ್ದೆ’ ಎಂದು ಕನಸು ಕಾಣುತ್ತಿರುತ್ತಾರೆ.
ಅದೇ ರೀತಿ ಚಿತ್ರದುರ್ಗದ ಹಿರಿಯೂರಿನ ಆರ್ ಸಿಬಿ ಅಭಿಮಾನಿಯೊಬ್ಬ ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ ಕಪ್ ಗೆಲ್ಲಲಿ ಅಂತಾ ದೇವರ ಮೊರೆ ಹೋಗಿದ್ದಾನೆ.
ಹೌದು..! ಹಿರಿಯೂರಿನ ತೇರುಮಲ್ಲೇಶ್ವರ ಸ್ವಾಮಿ ರಥೋತ್ಸವದ ವೇಳೆ ಬೇಡಿಕೆಯನ್ನು ಇಡೇರಿಸುವಂತೆ ತೇರಿಗೆ ಬಾಳೆಹಣ್ಣನ್ನು ಎಸೆದು ಹರಕೆ ಕಟ್ಟಿಕೊಳ್ಳುವುದು ವಾಡಿಕೆಯಾಗಿದೆ.
ಈ ಹಿನ್ನೆಲೆ ಇಲ್ಲಿನ ಆರ್ ಸಿಬಿ ಅಭಿಮಾನಿ ತೇರಿಗೆ ಬಾಳೆಹಣ್ಣು ಮತ್ತು 10 ರೂ. ನೋಟಿನ ಮೇಲೆ ಜೈ ಆರ್ ಸಿಬಿ ಅಂತಾ ಬರೆದು ಹರಕೆ ಕಟ್ಟಿಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.