ಬೆಂಗಳೂರು: ಕೊರೊನಾ ವೈರಸ್ ಸೋಂಕು ದೇಶದ ರಕ್ತ ನಿಧಿಗಳ ಮೇಲೆ ಗಂಭೀರ ಪರಿಣಾಮ ಬೀರಿದೆ. ಅದರಂತೆ ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿಯಲ್ಲಿ ಕೂಡ ರಕ್ತದ ತೀವ್ರ ಅಭಾವ ಎದುರಾಗಿದೆ. ಹೀಗಾಗಿ ರಕ್ತದಾನಿಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕರ್ನಾಟಕ ಶಾಖೆಯ ಸಭಾಪತಿ ಎಸ್. ನಾಗಣ್ಣ ಮನವಿ ಮಾಡಿದ್ದಾರೆ.
ರೆಡ್ ಕ್ರಾಸ್ ರಕ್ತ ನಿಧಿಯಿಂದ ಮಾಸಿಕ 3,500 ಯೂನಿಟ್ ರಕ್ತ ಸಂಗ್ರಹಿಸಲಾಗುತ್ತಿತ್ತು. ಇದೀಗ ರಕ್ತ ಸಂಗ್ರಹ ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಕರ್ನಾಟಕ ರೆಡ್ ಕ್ರಾಸ್ ಸಂಸ್ಥೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕರ್ನಾಟಕ ರಾಜ್ಯ ಶಾಖೆಯ ಬೆಂಗಳೂರು ರಕ್ತ ನಿಧಿಯಲ್ಲಿ ಕೇವಲ 50 ರಕ್ತದ ಯೂನಿಟ್ ಗಳು ಮಾತ್ರವೇ ಉಳಿದಿವೆ. ರಕ್ತ ನಿಧಿಗೆ ಪ್ರತಿದಿನ 100 ಯೂನಿಟ್ ಗೂ ಹೆಚ್ಚು ರಕ್ತಕ್ಕೆ ಬೇಡಿಕೆ ಬರುತ್ತಿದೆ. ರಕ್ತ ಹೀನತೆ, ಗರ್ಭೀಣಿ ಮಹಿಳೆಯರಿಗೆ, ತಲಸ್ಸೇಮಿಯಾ, ಸಿಕಲ್ ಸೆಲ್, ಅನಿಮಿಯಾ, ಡಯಾಲಿಸಸ್ ರೋಗಿಗಳು, ಕ್ಯಾನ್ಸರ್, ತುರ್ತು ಶಸ್ತ್ರ ಚಿಕಿತ್ಸೆ, ಇತರೆ ರೋಗಿಗಳಿಗೆ ಮಾಸಿಕ ಐದು ಸಾವಿರ ಯೂನಿಟ್ ಗಿಂತ ಹೆಚ್ಚು ರಕ್ತದ ಅಗತ್ಯವಿದೆ.
ಪಾಸ್ ವಿತರಣೆ!
ಜೀವ ಉಳಿಸಲು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಇಚ್ಚಿಸುವ ದಾನಿಗಳು ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ರೆಡ್ ಕ್ರಾಸ್ ರಕ್ತ ನಿಧಿ, ನಂ 26, ರೆಡ್ ಕ್ರಾಸ್ ಭವನ, ಮೊದಲನೇ ಮಹಡಿಗೆ ಭೇಟಿ ನೀಡಬಹುದು. ರಕ್ತದಾನ ಮಾಡಲು ಮುಂದೆ ಬರುವವರಿಗೆ ಪಾಸ್ ವಿತರಿಸಲಾಗುವುದು. 20 ಮಂದಿಗಿಂತ ಹೆಚ್ಚು ಜನ ರಕ್ತದಾನ ಶಿಬಿರ ಆಯೋಜಿಸಲು ಇಚ್ಚಿಸಿದಲ್ಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಎಸ್. ನಾಗಣ್ಣ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ : ಸಂಪರ್ಕಿಸಿ: 080-22268435/9902859859








