ಬೆಳಗಾವಿ : ಮತಾಂತರಕ್ಕೆ ಯತ್ನ ಆರೋಪ, ವ್ಯಕ್ತಿಯ ಮೇಲೆ ಹಲ್ಲೆ
ಬೆಳಗಾವಿ : ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಯುವಕರ ಗುಂಪೊಂದು ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಮನೆಯಲ್ಲಿರುವ ವಸ್ತುಗಳನ್ನ ಧ್ವಂಸ ಮಾಡಿರುವ ಘಟನೆ ಗೋಕಾಕ್ ತಾಲೂಕಿನ ಬಿಲಕುಂದಿ ಗ್ರಾಮದಲ್ಲಿ ನಡೆದಿದೆ. ಸದಾಶಿವ ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ಸದ್ಯ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ನಿನ್ನೆ ಸಂಜೆ ಸದಾಶಿವ ಅವರ ಮನೆಯಲ್ಲಿ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದರು. ಈತ ಬೆಥೆಲ್ ಎಜಿ ಚರ್ಚ್ನ ಸದಸ್ಯ ಆಗಿರುವುದರಿಂದ ಮನೆಯಲ್ಲಿ ಚರ್ಚ್ ಸದಸ್ಯರು ಪ್ರಾರ್ಥನೆ ಸಲ್ಲಿಸುತ್ತಿದ್ದರಂತೆ. ಈ ವೇಳೆ ಸುಮಾರು 20 ರಿಂದ 25 ಜನರು ಗುಂಪು ಏಕಾಏಕಿ ಮನೆಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ತಿಳಿದುಬಂದಿದೆ. ಯುವಕರ ತಂಡ ಸದಾಶಿವ ಮನೆಯ ವಸ್ತುಗಳನ್ನ ಧ್ವಂಸಗೊಳಿಸಿದ್ದು, ಅಲ್ಲದೇ ಆತನ ಮೇಲೆ ಹಲ್ಲೆ ನಡೆಸಿದೆಯಂತೆ. ಇದಾದ ಬಳಿಕ ಸೀದ ಬೆಥೆಲ್ ಎ ಜಿ ಚರ್ಚ್ ಮೇಲೆ ದಾಳಿ ಮಾಡಿ ಶಿಲುಬೆಯನ್ನ ಧ್ವಂಸಗೊಳಿಸಿದ್ದಾರೆ.
ಇನ್ನು ಈ ಸಂಬಂಧ ಕುಲಗೋಡು ಪೊಲೀಸ್ ಠಾಣೆಯಲ್ಲಿ ಚರ್ಚ್ ಫಾದರ್ ದೂರು ನೀಡಿದ್ದು, ಹಲ್ಲೆಗೊಳಗಾದ ಸದಾಶಿವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ದೂರಿನ ಅನ್ವಯ 5 ಜನ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಪೊಲೀಸರು ಮೊಕ್ಕಾಂ ಹೂಡಿದ್ದು, ಬಿಗುವಿನ ವಾತಾವರಣವಿದೆ.