ಸಾಹುಕಾರ್ ವಿರುದ್ಧ ಗೋಕಾಕ್ ನಲ್ಲಿ `ಚಡ್ಡಿ’ ಹಿಡಿದು ಪ್ರೊಟೆಸ್ಟ್
ಬೆಳಗಾವಿ : ಸಚಿವ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ಮತ್ತು ರಮೇಶ್ ಜಾರಕಿಹೊಳಿ ತಲೆದಂಡಕ್ಕೆ ಒತ್ತಾಯಿಸಿ ಗೋಕಾಕಿನಲ್ಲಿ ಚಡ್ಡಿ ಹಿಡಿದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ರಾಜ್ಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ವಿಪಕ್ಷಗಳು ಒತ್ತಾಯಿಸುತ್ತಿವೆ.
ಇನ್ನೊಂದೆಡೆ ಯಾವುದೇ ಕಾರಣ ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ ಅಂತಾ ಹೇಳಿದ್ದ ರಮೇಶ್ ಜಾರಕಿಹೊಳಿ ಇದೀಗ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ಸದ್ಯ ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಟಾಕ್ ಆಫ್ ದಿ ಟೌನ್ ಆಗಿದೆ.
ಗೋಕಾಕ್ ನಗರದ ಬಸವೇಶ್ವರ ವೃತ್ತದಲ್ಲಿ ಜೆಡಿಎಸ್ ಮುಖಂಡ ಅಶೋಕ ಪೂಜಾರಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ, ರಮೇಶ್ ಜಾರಕಿಹೊಳಿ ಅವರು ಅದು ಫೇಕ್ ವಿಡಿಯೋ ಎಂದು ಹೇಳುತ್ತಿದ್ದಾರೆ.
ಅವರ ಹೇಳಿಕೆಯನ್ನು ನಂಬಲಾಗದ ಸ್ಥಿತಿಯಲ್ಲಿ ಆ ದೃಶ್ಯಾವಳಿಗಳಿವೆ. ವಿಡಿಯೋದಲ್ಲಿರುವುದು ಸತ್ಯವೋ, ಅಸತ್ಯವೋ ತನಿಖೆ ನಂತರ ಸತ್ಯ ಹೊರ ಬರಬೇಕಾದರೆ ಎರಡರಿಂದ ಮೂರು ವರ್ಷವೇ ಬೇಕು.
ಸಚಿವ ರಮೇಶ್ ಜಾರಕಿಹೊಳಿ ಮೇಲೆ ಗುರುತರ ಆರೋಪ ಬಂದಿದೆ. ನೈತಿಕ ಹೊಣೆ ಹೊತ್ತು ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.