ಬೇವಿನ ಬೀಜವ ಬಿತ್ತಿ ಮಾವಿನ ಫಲ ಬೇಕೆಂದರೆ ಹೇಗೆ : ಡಾ.ತೋಂಟದ ಸಿದ್ಧರಾಮ ಶ್ರೀ
ಗದಗ : ಪ್ರಜಾಪ್ರಭುತ್ವದಲ್ಲಿ ಯೋಗ್ಯ ವ್ಯಕ್ತಿಗಳನ್ನು ಆರಿಸಿ ತರಬೇಕು. ಹಣ ಹೆಂಡಕ್ಕೆ ಆಸೆ ಮಾಡಿ ಅಯೋಗ್ಯರನ್ನು ಆರಿಸಿ ತಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಡುತ್ತೆ ಎಂದು ಡಾ.ತೋಂಟದ ಸಿದ್ಧರಾಮ ಶ್ರೀಗಳು ಹೇಳಿದ್ದಾರೆ.
ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣ ಸಂಬಂಧ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಯೋಗ್ಯ ವ್ಯಕ್ತಿಗಳನ್ನು ಆರಿಸಿ ತರಬೇಕು. ಹಣ ಹೆಂಡಕ್ಕೆ ಆಸೆ ಮಾಡಿ ಅಯೋಗ್ಯರನ್ನು ಆರಿಸಿ ತಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಹದಗೆಡುತ್ತೆ. ಬೇವಿನ ಬೀಜವ ಬಿತ್ತಿ ಮಾವಿನ ಫಲ ಬೇಕೆಂದರೆ ಹೇಗೆ ಎಂದು ಪ್ರಶ್ನಿಸಿದರು.
ಇನ್ನು ಐದು ವರ್ಷಕ್ಕೊಮ್ಮೆ ಮಹತ್ವದ ಚುನಾವಣೆ ಬರುತ್ತೆ. ಆ ಚುನಾವಣೆಲಿ ನಾವೇ ದಾರಿ ತಪ್ಪುತ್ತೇವೆ. ಮುಂದೆ ಐದು ವರ್ಷವೂ ದಾರಿ ತಪ್ಪುತ್ತೆ. ಜನಪ್ರತಿನಿಧಿಗಳಷ್ಟೇ ದೋಷ ಇರುವುದಿಲ್ಲ…ಅವರನ್ನು ಆಯ್ಕೆ ಮಾಡೋ ಜನರ ದೋಷವೂ ಇದೆ. ಸ್ವಾರ್ಥಕ್ಕಾಗಿ ಆಮೀಷಕ್ಕಾಗಿ ಆಸೆ ಪಟ್ಟು ಜನಪ್ರತಿನಿಧಿ ಆಯ್ಕೆ ಮಾಡಿದರೆ ಇದೇ ರೀತಿ ಆಗುತ್ತೆ ಎಂದು ಹೇಳಿದರು.
ಇದೇ ವೇಳೆ ಮೀಸಲಾತಿ ಹೋರಾಟ ವಿಚಾರ ಪ್ರತಿಕ್ರಿಯಿಸಿ, ಪಂಚಮಸಾಲಿ ಸಮಾಜ ನಾಲ್ಕು ತಿಂಗಳಿಂದ ಹೋರಾಟ ಮಾಡುತ್ತಾ ಬಂದಿದೆ. ಸಮಿತಿ ರಚನೆ ಕಳೆದ ನಾಲ್ಕು ತಿಂಗಳ ಹಿಂದೇನೆ ನೇಮಿಸಬೇಕಿತ್ತು. ತಡವಾಗಿ ಸಮಿತಿ ರಚನೆ ಆದ್ರೂ ಸಂತಸದ ವಿಚಾರ ಎಂದರು.
ಇನ್ನು ಮೀಸಲಾತಿಗೆ ಸಂಬಂಧಿಸಿದಂತೆ ಸರಿಯಾಗಿ ಅಧ್ಯಯನ ನಡೆಯಬೇಕು. ಮೀಸಲಾತಿ ಮಾಡುವುದರಿಂದ ಯಾರಿಗೆ ತೊಂದರೆ ಆಗುತ್ತೆ… ಲಾಭ ಯಾರಿಗೆ ಆಗುತ್ತೆ ತಿಳಿಯಬೇಕು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಸೌಲಭ್ಯ ದೊರೆಯಬೇಕಿದೆ. ಮೀಸಲಾತಿಯನ್ನು ಉಳ್ಳವರೇ ಪಡೆದುಕೊಳ್ಳುವಂತೆ ಆಗಬಾರದು.
ಸಾಮಾನ್ಯ ಜನ್ರಿಗೆ ಮೀಸಲಾತಿಯ ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರಬೇಕಿದೆ. ಸಚಿವರು, ಶಾಸಕರು, ರಾಜಕಾರಣಿಗಳು ಪಕ್ಷ ಬೇಧ ಮರೆತು ಹೋರಾಟ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.