ಅಶ್ವಿನ್ ಮುಕುಟಕ್ಕೆ ಮತ್ತೊಂದು ಗರಿ.. ಎರಡನೇ ಬಾರಿ 30ಕ್ಕೂ ಅಧಿಕ ವಿಕೆಟ್ ಪಡೆದ ಮೊದಲ ಭಾರತದ ಬೌಲರ್ …!
ಆರ್. ಅಶ್ವಿನ್ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಅತ್ಯುತ್ತಮ ಫಾರ್ಮ್ ನಲ್ಲಿರುವ ಅಶ್ವಿನ್ ಸ್ಪಿನ್ ಎಸೆತಗಳಿಗೆ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳು ತಲ್ಲಣಗೊಂಡಿದ್ದಾರೆ.
ಇದೀಗ ಮುಗಿದಿರುವ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಅಶ್ವಿನ್ ಅವರ ಕೈಚಳಕಕ್ಕೆ ಆಂಗ್ಲ ಬ್ಯಾಟ್ಸ್ ಮೆನ್ ಚಕಿತಗೊಂಡಿದ್ದಾರೆ. ಹೀಗಾಗಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಅಶ್ವಿನ್ ಅವರಿಗೆ ಅರ್ಹವಾಗಿಯೇ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದು ಬಂದಿದೆ.
ಟೆಸ್ಟ್ ಕ್ರಿಕೆಟ್ ನಲ್ಲಿ 400 ವಿಕೆಟ್ ಗಳನ್ನು ಕಬಳಿಸಿರುವ ಅಶ್ವಿನ್ ಚೆನ್ನೈ ನಲ್ಲಿ ನಡೆದಿದ್ದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕವನ್ನು ದಾಖಲಿಸಿದ್ದರು.
ಚೆನ್ನೈ ಮತ್ತು ಮೊಟೇರಾ ಅಂಗಣದ ಲಾಭವನ್ನು ಪಡೆದುಕೊಂಡ ಅಶ್ವಿನ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಬಳಿಸಿದ್ದ ವಿಕೆಟ್ ಗಳ ಸಂಖ್ಯೆ 32. ಅದ್ರಲ್ಲೂ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ಅಶ್ವಿನ್ ಅವರು 47ಕ್ಕೆ ಐದು ವಿಕೆಟ್ ಉರುಳಿಸಿದ್ದರು. ಇನ್ನೊಂದೆಡೆ ಅಕ್ಸರ್ ಪಟೇಲ್ 48ಕ್ಕೆ ಐದು ವಿಕೆಟ್ ಕಬಳಿಸಿದ್ದರು. ಹೀಗಾಗಿ ಟೀಮ್ ಇಂಡಿಯಾ ಇನಿಂಗ್ಸ್ ಹಾಗೂ 25ರನ್ ಗಳಿಂದ ಗೆಲುವಿನ ನಗೆ ಬೀರಿತ್ತು.
ಈ ನಡುವೆ ಅಶ್ವಿನ್ ಅವರ ಹೆಸರಿಗೆ ಗೊತ್ತಿಲ್ಲದ ದಾಖಲೆಯೊಂದು ಸೇರಿಕೊಂಡಿದೆ. ಹೌದು, ಟೆಸ್ಟ್ ಸರಣಿಯೊಂದರಲ್ಲಿ 30ಕ್ಕಿಂತ ಹೆಚ್ಚು ವಿಕೆಟ್ ಪಡೆದ ಸಾಲಿಗೆ ಈ ಹಿಂದೆಯೇ ಸೇರಿಕೊಂಡಿದ್ದರು. 2015ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 31 ವಿಕೆಟ್ ಪಡೆದಿದ್ದರು. ಇದೀಗ ದಾಖಲೆಯಾಗಿದ್ದು ಎರಡು ಬಾರಿ 30ಕ್ಕಿಂತ ಹೆಚ್ಚು ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ ಬಿಷನ್ ಸಿಂಗ್ ಬೇಡಿ, ಬಿ.ಎಸ್. ಚಂದ್ರ ಶೇಖರ್, ಕಪಿಲ್ ದೇವ್ ಮತ್ತು ಹರ್ಭಜನ್ ಸಿಂಗ್ ಒಂದು ಬಾರಿ ಈ ಸಾಧನೆ ಮಾಡಿದ್ದರು. ಆದ್ರೆ ಈಗ ಅಶ್ವಿನ್ ಎರಡು ಬಾರಿ ಈ ಸಾಧನೆ ಮಾಡಿ ತನ್ನ ಮುಕಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ.
ಇನ್ನು ಅಶ್ವಿನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 400 ವಿಕೆಟ್ ಪಡೆದ ನಾಲ್ಕನೇ ಬೌಲರ್ ಆಗಿ ಹೊರಹೊಮ್ಮಿದ್ರು.