ಕೊಲ್ಕತ್ತಾ: ತನ್ನ ಪರ ತೀರ್ಪು ನೀಡಲಿಲ್ಲ ಎಂಬ ಕಾರಣಕ್ಕೆ ವಕೀಲರೊಬ್ಬರು ನ್ಯಾಯಾಧೀಶರಿಗೆ ನಿಮಗೂ ಕೊರೊನಾ ವೈರಸ್ ಬರಲಿ ಎಂಬ ಶಾಪ ಹಾಕಿರುವ ಘಟನೆ ಕೋಲ್ಕತಾದಲ್ಲಿ ನಡೆದಿದೆ.
ತಮ್ಮ ಕಕ್ಷಿದಾರರ ಪರವಾಗಿ ತೀರ್ಪು ಕೊಡಲಿಲ್ಲ ಎಂಬ ಕಾರಣಕ್ಕೆ ಕೊಲ್ಕತ್ತಾದಲ್ಲಿ ವಕೀಲ ಬಿಜೋಯ್ ಅಧಿಕಾರಿ ಅವರು ನ್ಯಾಯಮೂರ್ತಿಗಳಿಗೆ ಕೊರೊನಾ ವೈರಸ್ ಬರಲಿ ಎಂದು ಶಾಪ ಹಾಕಿದ್ದಾರೆ. ಈ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಏನಿದು ಪ್ರಕರಣ?
ಲಾಕ್ ಡೌನ್ ಹಿನ್ನೆಲೆ ದೇಶದ ಎಲ್ಲ ಕೋರ್ಟ್ ಗಳೂ ತುರ್ತು ಪ್ರಕರಣಗಳನ್ನು ಹೊರತು ಪಡಿಸಿ ಬೇರೆ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿಲ್ಲ. ಆದರೆ ಇತ್ತ ತನ್ನ ಕಕ್ಷಿದಾರನ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ನಡೆಸದೆ, ಆತನ ಪರವಾಗಿ ತೀರ್ಪು ನೀಡದ ನ್ಯಾಯಮೂರ್ತಿ ದೀಪಂಕರ್ ದತ್ತ ಅವರ ವಿರುದ್ಧ ವಕೀಲ ಬಿಜೋಯ್ ಅಧಿಕಾರಿ ಆಕ್ರೋಶ ವ್ಯಕ್ತಪಡಿಸಿ ಜಡ್ಜ್ ಗೆ ಕೊರೊನಾ ಸೋಂಕು ಬರಲಿ ಎಂದು ಶಾಪ ಹಾಕಿದ್ದಾರೆ.
ಸ್ಪಷ್ಟನೆ ನೀಡಬೇಕೆಂದು ನ್ಯಾಯಮೂರ್ತಿ ದೀಪಂಕರ್ ದತ್ತ ಗಡುವು
ತಮ್ಮ ವಿರುದ್ಧ ಶಾಪ ಹಾಕಿದ ವಕೀಲ ಬಿಜೋಯ್ ಅಧಿಕಾರಿ ನಡವಳಿಕೆಯನ್ನು ಜಡ್ಜ್ ಖಂಡಿಸಿದ್ದಾರೆ. ಈ ನಡವಳಿಕೆಗೆ ಸ್ಪಷ್ಟನೆ ನೀಡಬೇಕೆಂದು ನ್ಯಾಯಮೂರ್ತಿ ದೀಪಂಕರ್ ದತ್ತ ಗಡುವು ನೀಡಿದ್ದಾರೆ. ಅಲ್ಲದೆ, ಈ ಬಗ್ಗೆ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಿ, ತಕ್ಕ ಶಿಕ್ಷೆ ನೀಡಬೇಕೆಂದು ಆದೇಶಿಸಿದ್ದಾರೆ.








