ರಾಜ್ಯ ಬಜೆಟ್ 2021 : ಕೊರತೆ ಬಜೆಟ್ ಸಾಧ್ಯತೆ.. ಸಾಲದ ಪ್ರಮಾಣ ಎಷ್ಟಿದೆ ಗೊತ್ತಾ..?
ಬೆಂಗಳೂರು : ಆರ್ಥಿಕ ಹಿಂಜರಿತ ಮತ್ತು ಕೋವಿಡ್ ಸಂಕಷ್ಟದ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಬಹುನಿರೀಕ್ಷತ ಬಜೆಟ್ ಮಂಡಿಸಲಿದ್ದಾರೆ. ರಾಜಾಹುಲಿ ಲೆಕ್ಕದ ಮೇಲೆ ಜನ ಸಾಮಾನ್ಯರಿಗೆ ಬೆಟ್ಟದಷ್ಟು ನಿರೀಕ್ಷೆ ಇದೆ. ಈ ಮಧ್ಯೆ ಈ ಬಾರಿಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಲ ಪಡೆಯುವ ಪ್ರಮಾಣ ಹೆಚ್ಚಿಸುವುದರ ಜೊತೆಗೆ ಕೊರತೆ ಬಜೆಟ್ ಮಂಡಿಸುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಸಿಎಂ ಬಿಎಸ್ ಯಡಿಯೂರಪ್ಪ ಬಜೆಟ್ ನಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಇದಲ್ಲದೆ ಈ ಬಾರಿಯ ಬಜೆಟ್ ನಲ್ಲಿ ಕೃಷಿ, ಮಹಿಳೆಯರು, ಆರೋಗ್ಯ ಕ್ಷೇತ್ರ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುದಾನ, ಹೊಸ ಯೋಜನೆಗಳನ್ನು ಪ್ರಕಟಿಸುವ ನಿರೀಕ್ಷೆಗಳಿವೆ ಎಂದೂ ಮೂಲಗಳು ಹೇಳಿವೆ. ಪ್ರಮುಖವಾಗಿ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವವರಿಗೆ ಒಂದಿಷ್ಟು ಬೂಸ್ಟ್ ನೀಡುವ ಯೋಜನೆಗಳನ್ನ ಸಿಎಂ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಆದ್ರೆ ಆರ್ಥಿಕ ಸಮೀಕ್ಷೆ ಕೊರತೆ ಬಜೆಟ್ ಸುಳಿವು ನೀಡಿದ್ದು, ಸದ್ಯ ರಾಜ್ಯದ ವರಮಾನದಲ್ಲಿ ಶೇಕಡಾ 93 ರಷ್ಟು ಬಾಬ್ತು ಸಂಬಳ, ಪಿಂಚಣಿ, ಬಡ್ಡಿ ಪಾವತಿಯ ಬದ್ಧತಾ ವೆಚ್ಚಕ್ಕೆ ವ್ಯಯವಾಗುತ್ತದೆ. ಅಭಿವೃದ್ಧಿಗೆ ಶೇ 7 ರಷ್ಟು ಮಾತ್ರ ಲಭ್ಯವಾಗಲಿದೆ. ಹೀಗಾಗಿ ಜನಪ್ರಿಯ ಯೋಜನೆಗಳಿಗೆ ಹಣಬೇಕಿದ್ದರೇ ಸಾಲ ಮಾಡುವುದು ಅನಿವಾರ್ಯವಾಗಿದೆ.
ರಾಜ್ಯದ ಸಾಲದ ಪ್ರಮಾಣ ಈಗ 3.68 ಲಕ್ಷ ಕೋಟಿ ಇದೆ. 33 ಸಾವಿರ ಕೋಟಿ ಸಾಲ ತೆಗೆದುಕೊಂಡರೆ, ಒಟ್ಟು ಸಾಲವು 4 ಲಕ್ಷ ಕೋಟಿ ಮೀರಲಿದೆ ಎಂದು ಹೇಳಲಾಗಿದೆ.