ಬೆಂಗಳೂರು: ಲಾಕ್ ಡೌನ್ ಹಿನ್ನೆಲೆ ಬಡ ವರ್ಗದ ಕುಟುಂಬಗಳಿಗೆ ಹಾಗೂ ಕಾರ್ಮಿಕರಿಗೆ ಬದುಕು ಸಾಗಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥವರಿಗೆ ಅನುಕೂಲವಾಗುವ ದೃಷ್ಠಿಯಿಂದ ಸರ್ಕಾರ ಉಚಿತವಾಗಿ ದಿನಸಿ ಸಾಮಗ್ರಿಗಳನ್ನ ವಿತರಿಸುವ ವ್ಯವಸ್ಥೆ ಮಾಡಿದೆ. ಆದ್ರೆ ಈ ವೇಳೆ ಕೆಲವು ಬಿಜೆಪಿ ನಾಯಕರು ತಮ್ಮ ಭಾವಚಿತ್ರ ಹಾಕಿಕೊಂಡು ಸಾಮಗ್ರಿಗಳನ್ನ ಹಂಚುತ್ತಿದ್ದಾರೆ. ಈ ಕುರಿತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟ್ವಿಟ್ವರ್ ನಲ್ಲಿ ಕಿಡಿಕಾರಿದ್ದು, ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ ಎಂದಿದ್ದಾರೆ.
ಹೆಚ್ ಡಿಕೆ ಟ್ವೀಟ್ ನಲ್ಲಿ ಏನಿದೆ..?
“ಸಂಕಟದಿಂದ ಹೇಗೆ ಪಾರಾಗುವುದೆಂದು ಇಡೀ ಜಗತ್ತು ಚಿಂತಿಸುತ್ತಿದ್ದರೆ, ಬಿಜೆಪಿಯ ಕೆಲ ನಾಯಕರುಗಳು ಸರ್ಕಾರದ ಪರಿಹಾರ ಸಾಮಗ್ರಿ ಮೇಲೆ ತಮ್ಮ ಫೋಟೋ ಹಾಕಿಕೊಂಡು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ.
ಇದೇನು ಜನಸಾಮಾನ್ಯರಿಗೆ ಸರ್ಕಾರ ನೀಡುವ ಪರಿಹಾರ ಸಾಮಗ್ರಿಯೋ? ಬಿಜೆಪಿಯ ಕೊಡುಗೆಯೋ? ಅಥವಾ ಲಿಂಬಾವಳಿಯವರ ವೈಯಕ್ತಿಕ ದಾನವೋ? ಅಥವಾ ಲಜ್ಜೆಗೇಡಿ ರಾಜಕಾರಣವೋ? ಪ್ರಧಾನಿ ಮೋದಿ ಮತ್ತು ಸನ್ಮಾನ್ಯ
ಯಡಿಯೂರಪ್ಪ ಇದಕ್ಕೆ ಉತ್ತರ ಹೇಳುವರೇ?
ಒಂದು ಸಮುದಾಯವನ್ನು ಕೊರೊನಾ ಮಹಾಮಾರಿಗೆ ಸಮೀಕರಿಸುವವರ ಬಗ್ಗೆ ದಿವ್ಯ ಮೌನ ತಳೆದ ಪ್ರಧಾನಿಗಳು ಬಡ ಕಾರ್ಮಿಕರ ಪರಿಹಾರ ಸಾಮಗ್ರಿಯನ್ನು ಕೆಲ ಪ್ರಚಾರ ಪ್ರಿಯರು ತಮ್ಮ ಫೋಟೋ ಸ್ಟಿಕ್ಕರ್ ಅಂಟಿಸಿ ನೀಡುವುದಕ್ಕೆ ಸಮ್ಮತಿ ಸೂಚಿಸಿದ್ದಾರೆಯೇ?”
ಹೀಗೆ ಬಿಜೆಪಿ ನಾಯಕರ ವಿರುದ್ಧ ಸರಣಿ ಟ್ವೀಟ್ ಗಳ ಮೂಲಕ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.








