ಬೆಂಗಳೂರು: ಕೊರೊನಾ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಆದ್ರೆ ಈ ಲಾಕ್ ಡೌನ್ ರೈತರ ಬದುಕನ್ನು ಬರ್ಬಾದ್ ಮಾಡಿದ್ದು, ಲಾಕ್ ಡೌನ್ ಆತುರದ ನಿರ್ಧಾರದಂತೆ ಕಾಣಿಸುತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಲಾಕ್ ಡೌನ್ ಕುರಿತು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಕೆಲವು ಸಲಹೆಗಳನ್ನು ನೀಡಿದ್ದಾರೆ.
ಪ್ರತಿ ವರ್ಷ ತೋಟಗಾರಿಕಾ ಬೆಳೆ ವ್ಯಾಪ್ತಿ ಹೆಚ್ಚಾಗುತ್ತಿದೆ. ಸದ್ಯ ಲಾಕ್ ಡೌನ್ ಹಿನ್ನೆಲೆ ಬೆಳೆ ಮಾರಾಟಕ್ಕೆ ಮಾರುಕಟ್ಟೆಗೆ ಸಿಗದೆ ರೈತರ ಬದುಕು ಉರಿಯುವ ಬೆಂಕಿಯಲ್ಲಿ ಬಿದ್ದಂತಾಗಿದೆ. ರೈತರ ಪಾಲಿಗೆ ಲಾಕ್ ಡೌನ್ ಆತುರದ ನಿರ್ಧಾರದಂತೆ ಕಾಣಿಸುತ್ತದೆ. ವೈರಾಣು ಕಾಣಿಸಿಕೊಂಡಿದ್ದರೂ ಎರಡು ತಿಂಗಳು ಸುಮ್ಮನಿದ್ದಂತಾಗಿದೆ. ಮುಂದಾಲೋಚನೆ ಇಲ್ಲದೆ ತರಾತುರಿಯಲ್ಲಿ ಲಾಕ್ ಡೌನ್ ತೆಗೆದುಕೊಂಡಂತಾಗಿದೆ. ಇದರಿಂದಾಗಿ ರಾಜ್ಯ ಹಾಗೂ ದೇಶದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ದೇವೇಗೌಡ ಬೇಸರ ಹೊರಹಾಕಿದ್ದಾರೆ.
ಹೆಚ್ ಡಿಡಿ ಸಲಹೆಗಳೇನು?
ಲಾಕ್ ಡೌನ್ ವೇಳೆ ಗ್ರಾಮಮಟ್ಟದಲ್ಲೇ ಹಾಲು ಸಂಗ್ರಹಿಸುವಂತೆ ತರಕಾರಿಯನ್ನು ಸರ್ಕಾರವೇ ಸಂಗ್ರಹಿಸಿ ಮಾರುಕಟ್ಟೆಗೆ ತರಬೇಕಿತ್ತು. ಹಾಪ್ ಕಾಮ್ಸ್, ಸಫಲ್, ನ್ಯಾಪೆಡ್, ಎಪಿಎಂಸಿ ಮೂಲಕ ತರಕಾರಿ ಕೊಳ್ಳುವ ವ್ಯವಸ್ಥೆ ಮಾಡಬೇಕಿತ್ತು. ಲಾಕ್ ಡೌನ್ ಇದ್ದರೂ ತರಕಾರಿ ಸಂಗ್ರಹಣೆ, ಸಾಗಾಟ, ಮಾರಾಟಕ್ಕೆ ನಿರ್ಬಂಧ ಹೇರಬಾರದು. ದೇಶದ ಯಾವುದೇ ಪ್ರದೇಶಕ್ಕೆ ಅಡೆತಡೆಗಳಿಲ್ಲದೆ ಸಾಗಾಟಕ್ಕೆ ಮತ್ತು ಮಾರಾಟಕ್ಕೆ ಅನುವು ಮಾಡಿ ಕೊಡಬೇಕು. ತೋಟಗಾರಿಕೆ ಉತ್ಪನ್ನ ಮತ್ತು ಸಂಸ್ಕರಿಸಿದ ಪದಾರ್ಥಗಳ ರಫ್ತಿಗೆ ನಿರ್ಬಂಧಗಳು ಇರಬಾರದು. ಸಂಸ್ಕರಣಾ ಘಟಕಗಳಿಗೆ ಪೂರ್ಣ ವಿನಾಯತಿ ನೀಡಬೇಕು. ಅಲ್ಲದೇ ತರಕಾರಿ ಮಾರುಕಟ್ಟೆಗೆ ನ್ಯಾಷನಲ್ ಗ್ರಿಡ್ ರಚಿಸುವಂತೆ ಸರ್ಕಾರಕ್ಕೆ ಮಾಜಿ ಪ್ರಧಾನಿ ಸಲಹೆ ನೀಡಿದ್ದಾರೆ.







