ಅಕ್ರಮ ಸಂಬಂಧಕ್ಕೆ ಅಡ್ಡಿ : ಪತಿಯ ಕೊಲೆಗೈದ ಪತ್ನಿ
ಕಲಬುರಗಿ : ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸಿದ ಕಾರಣ ಪ್ರಿಯಕರನೊಂದಿಗೆ ಸೇರಿ ಪತ್ನಿಯೇ ಪತಿಯನ್ನ ಕೊಲೆ ಮಾಡಿರುವ ಘಟನೆ ಆಳಂದ ತಾಲೂಕಿನ ನಿಂಬರ್ಗಾದಲ್ಲಿ ನಡೆದಿದೆ. ರವಿ ನಿಲೂರ (35) ಕೊಲೆಯಾದ ವ್ಯಕ್ತಿಯಾಗಿದ್ದು, ಕೊಲೆ ಆರೋಪಿಗಳನ್ನ ಬಂಧಿಸಲಾಗಿದೆ.
ಹುಚ್ಚಪ್ಪ ಬಸರಿಗಿಡದ, ಲಾಡಪ್ಪ ಉದಯಕರ್, ಬಸವರಾಜ ಸಿಂಗೆ ಹಾಗೂ ಕೊಲೆಯಾದ ವ್ಯಕ್ತಿಯ ಪತ್ನಿ ಚಂದ್ರಕಲಾ ನಿಲೂರ ಬಂಧಿತ ಆರೋಪಿಗಳು.
ಇದೇ ಫೆಬ್ರವರಿ 16 ರಂದು ನಿಂಬರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಸ್ಟೇಷನ್ ಗಾಣಗಾಪುರ – ಪಟ್ಟಣಾ ಕ್ರಾಸ್ ಮಧ್ಯದ ಹೊಲವೊಂದರಲ್ಲಿ ರವಿ ನಿಲೂರ ಅವರ ಮೃತದೇಹ ಪತ್ತೆಯಾಗಿತ್ತು. ಈ ವೇಳೆ ಚಂದ್ರಕಲಾ ಇದೊಂದು ಕೊಲೆ ಎಂದು ನಿಂಬರ್ಗಾ ಠಾಣೆಗೆ ದೂರು ನೀಡಿದ್ದಳು. ಈ ಪ್ರಕರಣದ ಬೆನ್ನಟ್ಟಿದ ಪೊಲೀಸರು, ನಿಜಾಂಶವನ್ನು ಬಯಲಿಗೆಳೆದು ಚಂದ್ರಕಲಾ ಸೇರಿ ನಾಲ್ವರನ್ನು ಜೈಲಿಗೆ ಅಟ್ಟಿದ್ದಾರೆ.
ಚಂದ್ರಕಲಾ ಹಾಗೂ ಹುಚ್ಚಪ್ಪ ಬಸರಿಗಿಡದ ಮಧ್ಯೆ ಅನೈತಿಕ ಸಂಬಂಧವಿತ್ತಂತೆ. ಇದಕ್ಕೆ ರವಿ ನಿಲೂರ ಅಡ್ಡಿಪಡಿಸಿದ್ದಕ್ಕೆ ಕೊಲೆಗೈದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.










