ನಾನು ದಪ್ಪ ಆದ್ರೂ ಪಂಚೆ ಬದಲಾಗಲ್ಲ : ಸಿದ್ದರಾಮಯ್ಯ ಹಾಸ್ಯ
ಬೆಂಗಳೂರು : ಬುಧವಾರ ವಿಧಾನಸಭಾಯಲ್ಲಿ ಬೆಲೆ ಏರಿಕೆ ಕುರಿತು ಚರ್ಚೆ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಟ್ಟೆ ಖರೀದಿ ಬಗ್ಗೆ ಪ್ರಸ್ತಾಪಿಸಿದ್ರು. ಈ ವೇಳೆ ಸದನದಲ್ಲಿ ಸ್ವಾರಸ್ಯಕರ ಪ್ರಸಂಗ ನಡೆಯಿತು.
ಸದನದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಬೆಲೆ ಏರಿಕೆಯಿಂದಾಗಿ ಅಂಗಡಿಯಲ್ಲಿ ಸಾಮಾನು ಖರೀದಿ ಮಾಡುವುದಕ್ಕೆ ಆಗುತ್ತಿಲ್ಲ. ಅಷ್ಟೊಂದು ಬೆಲೆ ಏರಿಕೆಯಾಗಿದೆ ಎಂದ್ರು. ಈ ವೇಳೆ ಮಧ್ಯೆ ಪ್ರವೇಶಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನೀವು ಅಂಗಡಿಗೆ ಹೋಗುವ ಸ್ಥಿತಿಯಲ್ಲಿ ಇಲ್ಲ ಬಿಡಿ. ಎಲ್ಲವೂ ಮನೆಗೆ ಬರುತ್ತದೆ ಎಂದು ಕಾಲೆಳೆದರು. ಆಗ ಹಾಗಾದರೆ ನೀನು ಹೋಗುತ್ತಿಯಾ? ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.
ಈ ವೇಳೆ ಸ್ಪೀಕರ್ ಅವರು ಬಟ್ಟೆ ಖರೀದಿಗೆ ಸಿದ್ದರಾಮಯ್ಯ ಹೋಗಿದ್ರು ಎಂದು ಹೇಳಿದರು. ಆಗ ಸಿದ್ದರಾಮಯ್ಯ, ಹೌದು ನಾನು ಬಟ್ಟೆ ಖರೀದಿಸಿದ್ದು ಟಿವಿಯಲ್ಲಿ ಬಂತು ಎಂದರು. ಆಗ ಬೊಮ್ಮಾಯಿ ಅವರು, 90 ಸೆಟ್ ಬಟ್ಟೆ ತಂದ್ರಿ, ಅಷ್ಟೊಂದು ಏನು ಮಾಡ್ತೀರಾ ಎಂದ್ರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನಾನು ದಪ್ಪ ಆದ್ರೂ ಪಂಚೆ ಬದಲಾಗಲ್ಲ. ನಾನು ಹೇಗೆ ಇದ್ರೂ ಪಂಚೆ ಹಾಕಬಹುದು. ಅದಕ್ಕೆ ಅಷ್ಟೊಂದು ಬಟ್ಟೆ ತಂದಿದ್ದೆ ಎಂದು ಹೇಳಿದರು.









