ಪ್ರತಿಭಾ ಶಕ್ತಿಯನ್ನು ಗುರುತಿಸಿ ಬೆಳಕಿಗೆ ತರಲು ಪ್ರೋತ್ಸಾಹ ಅಗತ್ಯ : ಬಿ.ಸಿ.ಪಾಟೀಲ್
ಹಾವೇರಿ : ಪ್ರತಿಭೆಯೆನ್ನುವುದು ಶಕ್ತಿಯಿದ್ದಂತೆ. ಯಾರಲ್ಲಿ ಯಾವ ಶಕ್ತಿಯಿರುತ್ತದೆಯೋ ಗೊತ್ತಿಲ್ಲ. ಪ್ರತಿಭಾ ಶಕ್ತಿಯನ್ನು ಗುರುತಿಸಿ ಬೆಳಕಿಗೆ ತರಲು ಪ್ರೋತ್ಸಾಹ ಅಗತ್ಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಹಿರೆಕೆರೂರಿನ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ,ಎನ್‌ಎಸ್‌ಎಸ್ ಘಟಕ ಹಾಗೂ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ ನೆರವೇರಿಸಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ಪ್ರತಿಭೆ ಎನ್ನುವುದು ಕೇವಲ ಸಾಂಸ್ಕೃತಿಕ ಚಟುವಟಿಕೆ ಮನರಂಜನೆಗಳಲ್ಲಷ್ಟೇ ಇರದೇ ಕ್ರೀಡೆಯಲ್ಲಿಯೂ ಇರುತ್ತದೆ. ಇದನ್ನು ಹೊರತರಲು ವೇದಿಕೆ ಹಾಗೂ ಪ್ರೋತ್ಸಾಹಿಸುವ ಮನಸುಗಳು ಅಗತ್ಯವಾಗಿರುತ್ತದೆ.
ಪ್ರತಿಭಾ ಶಕ್ತಿಯಿಂದ ಒಳ್ಳೆಯ ಶಿಕ್ಷಣ ವಿದ್ಯಾರ್ಹತೆ ಸ್ಪರ್ಧಾಮನೋಭಾವನೆಯಿಂದ ಯುವಕರು ತಮ್ಮ ನೌಕರಿಯನ್ನು ಯಾರ ಪ್ರಭಾವವನ್ನೂ ಮಾಡದೇ ಸ್ವತಃ ಪಡೆಯಬಹುದಾಗಿದೆ. ನಮ್ಮನಮ್ಮ ಸಾಮರ್ಥ್ಯ ಏನೆಂಬುದನ್ನು ಮೊದಲು ಅರಿತು ಅದರತ್ತ ನಡೆಯಬೇಕಿದೆ ಎಂದು ಸ್ಫೂರ್ತಿಯ ಮಾತುಗಳನ್ನಾಡಿದರು.
ಕೊರೋನಾ ಮಹಾಮಾರಿಯ ಕಾರಣದಿಂದ ವಿದ್ಯಾರ್ಥಿಗಳ ಸಾಂಸ್ಕೃತಿಕ ಕ್ರೀಡಾ ಚಟುವಟಿಕೆಗಳಿಗೂ ತೊಂದರೆಯುಂಟಾಗಿರುತ್ತದೆ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಎಂಬುದನ್ನೂ ಮಾತ್ರ ಮರೆಯಬಾರದು. ಸರ್ಕಾರ ಹಂತಹಂತವಾರಿ ಶಾಲಾ ಕಾಲೇಜುಗಳನ್ನು ಆರಂಭಿಸಿದೆ ಎಂದು ಬಿ.ಸಿ.ಪಾಟೀಲ್ ಹೇಳಿದರು.