ನಿಮ್ಮ ಸಮುದಾಯದಲ್ಲಿ ಗೋವು ಭಕ್ಷಕರು ಇಲ್ಲವೆಂದು ಪ್ರಮಾಣ ಮಾಡುವಿರಾ? ಕಲ್ಲಡ್ಕ ಪ್ರಭಾಕರ್ ಭಟ್ ಗೆ ಮೊಯಿದ್ದೀನ ಬಾವಾ ಸವಾಲು
ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ರೆ, ನಿಮ್ಮ ಸಮುದಾಯದಲ್ಲಿ ಗೋವು ಭಕ್ಷಕರು ಯಾರು ಇಲ್ಲವೆಂದು ದೇವಸ್ಥಾನದಲ್ಲಿ ಪ್ರಮಾಣ ಮಾಡುವಿರಾ ಎಂದು ಮಾಜಿ ಶಾಸಕ ಮೊಯಿದ್ದೀನ ಬಾವಾ ಅವರು ಸವಾಲು ಹಾಕಿದ್ದಾರೆ.

ಶನಿವಾರ ತಾತ್ಕಾಲಿಕ ಗೋಶಾಲೆ ನಿರ್ಮಾಣಕ್ಕಾಗಿ ಕಪಿಲಾ ಗೋಶಾಲೆಯ ಮಾಲಿಕ ಪ್ರಕಾಶ್ ಶೆಟ್ಟಿಯವರಿಗೆ 1 ಲಕ್ಷ ರೂ ಚೆಕ್ ವಿತರಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಮೊಯಿದ್ದೀನ ಬಾವಾ, ಕೆಂಜಾರಿನಲ್ಲಿ ಇರುವ ಗೋಶಾಲೆ ನೆಲಸಮ ಮಾಡಿ ಗೋವುಗಳನ್ನು ಬೀದಿ ಪಾಲು ಮಾಡಿದ್ದೀರಿ. ಗೋವಿನ ಹೆಸರನ್ನು ಹೇಳಿಕೊಂಡು ಅಧಿಕಾರಕ್ಕೆ ಬಂದ ಸರ್ಕಾರ ಮತ್ತು ಶಾಸಕರು ಗೋವುಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೀವು ಮೊದಲು ಗೋವುಗಳ ವಾಸ್ತವ್ಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಿ. ಗೋವುಗಳಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವುದಕ್ಕೆ ವೈಯಕ್ತಿಕವಾಗಿ ನಾನು 1 ಲಕ್ಷ ರೂ ಚೆಕ್ ನೀಡುವೆ. ವಿಧಾನ ಪರಿಷತ್ ಸದಸ್ಯ ಫಾರೂಕ್ ಅವರು ಕೂಡ ಪರಿಷತ್ ನಿಧಿಯಿಂದ 5 ಲಕ್ಷ ರೂ ಕೊಡಿಸುವುದಾಗಿ ತಿಳಿಸಿದ್ದಾರೆ ಎಂದು ಬಾವಾ ಹೇಳಿದರು.
ಚುನಾವಣೆಯಲ್ಲಿ ಬಾವಾ ಅವರಿಗೆ ಮತ ಹಾಕಬೇಡಿ, ಅವರು ಆಯ್ಕೆಯಾದರೆ ಕೊಟ್ಟಿಗೆಯಲ್ಲಿ ಯಾವುದೇ ಗೋವುಗಳು ಉಳಿಯುವುದಿಲ್ಲ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿ ನೀವು ಅಯ್ಕೆಯಾಗಿದ್ದೀರಿ ಎಂದು ಶಾಸಕ ಭರತ್ ಶೆಟ್ಟಿ ಅವರ ವಿರುದ್ದ ಹರಿಹಾಯ್ದರು.
ಇಷ್ಟೆಲ್ಲಾ ಆಗಿದ್ದರೂ, ಸರ್ಕಾರ ಕೆಂಜಾರು ಗೋಶಾಲೆಯ ಗೋವುಗಳ ರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಲಿದ್ದೇನೆ. ಗೋವುಗಳ ವಿಚಾರದಲ್ಲಿ ಜಾತಿ ರಾಜಕೀಯ ಮಾಡುವುದನ್ನು ಬಿಟ್ಟು, ಗೋ ರಕ್ಷಣೆಗೆ ಮುಂದಾಗಿ ಎಂದು ಮೊಯಿದ್ದೀನ ಬಾವಾ ಒತ್ತಾಯಿಸಿದರು.

ಕಪಿಲಾ ಗೋ ಶಾಲೆಯ ಮುಖ್ಯಸ್ಥ ಪ್ರಕಾಶ್ ಶೆಟ್ಟಿ ಮಾತನಾಡಿ, ಬೀದಿ ಪಾಲಾಗಿರುವ ಗೋವುಗಳ ರಕ್ಷಣೆಗೆ ವ್ಯವಸ್ಥೆ ಕೈಗೊಳ್ಳಿ ಎಂದರೆ, ನೀವು ಗೋವು ಭಕ್ಷಕರೊಂದಿಗೆ ಇದ್ದೀರಿ ಎಂದು ಹೇಳುತ್ತಾರೆ. ಆದರೆ ಅವರು ಗೋವನ್ನು ಕಡೆಯುವವರ ಜೊತೆಗೆ ಇದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಾನುವಾರುಗಳಿಗೆ ಸರ್ಕಾರ ಅನ್ಯಾಯ ಮಾಡಿದೆ. ಹಸುವಿನ ಹೆಸರಿನಲ್ಲಿ ಅಧಿಕಾರಕ್ಕೆ ಬಂದವರು ಈ ಹಸುಗಳನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಶಾಶ್ವತ ಗೋಶಾಲೆಯನ್ನು ನಿರ್ಮಿಸಲು ಶ್ರೀ ರಾಮ ಸೇನೆ ನಮಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಗೋಪೂಜೆಗಾಗಿ ಶಾಸಕರಾದ ವೇದವ್ಯಾಸ ಕಾಮತ್, ಡಾ.ಭರತ್ ಶೆಟ್ಟಿ ಮತ್ತು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಅವರು ಕಪಿಲಾ ಗೋಶಾಲೆಗೆ ಭೇಟಿ ನೀಡಿದರು. ನೆಲಸಮಗೊಳಿಸಿದ ಬಳಿಕ ಯಾರೂ ನಮ್ಮನ್ನು ನೋಡಲು ಬಂದಿಲ್ಲ ಎಂದು ಪ್ರಕಾಶ್ ಶೆಟ್ಟಿ ಹೇಳಿದರು.
https://twitter.com/SaakshaTv/status/1370931426573479936?s=19
https://twitter.com/SaakshaTv/status/1370953799855136771?s=19
https://twitter.com/SaakshaTv/status/1370941291241046016?s=19








