ಸೀಲ್ ಡೌನ್ ವಿಚಾರದಲ್ಲಿ ಜನರಿಗೆ ಸಾಕಷ್ಟು ಗೊಂದಲಗಳಿವೆ. ಇದರಿಂದ ಜನ ಆತಂಕದಲ್ಲಿದ್ದಾರೆ. ಅಲ್ಲದೆ ಸೀಲ್ ಡೌನ್ ಬಗ್ಗೆ ಬೇರೆ ಸುದ್ದಿಗಳು ಹರಿದಾಡುತ್ತಿದ್ದಾವೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ,
ಆಹಾರ, ಔಷಧಿ, ಅಗತ್ಯ ವಸ್ತುಗಳ ಲಭ್ಯತೆ ಬಗ್ಗೆ ಜನರಲ್ಲಿ ಅನುಮಾನಗಳು ಮೂಡಿವೆ. ಹಾಗಾಗಿ ಜನ ಅವುಗಳ ದಾಸ್ತಾನಿಗೆ ಮುಂದಾಗಿದ್ದಾರೆ. ಇದು ಮತ್ತೊಂದು ಸಮಸ್ಯೆ ಸೃಷ್ಟಿ ಆಗುವ ತರ ಕಾಣುತ್ತದೆ. ಹಾಗಾಗಿ ಸರ್ಕಾರ ಜನರ ಅನುಮಾನಗಳನ್ನು ಬಗೆ ಹರಿಸಬೇಕು. ಈ ಬಗ್ಗೆ ಜನ ಸಾಮಾನ್ಯರಲ್ಲಿ ಮಾತ್ರವಲ್ಲ, ದಿನಸಿ ಅಂಗಡಿ, ಔಷಧಾಲಯಗಳು ತೆರೆಯಬೇಕೋ ಬೇಡವೋ ಎಂಬ ಅನುಮಾನ ಮಾರಾಟಗಾರರಲ್ಲಿ ಮೂಡಿದೆ. ಒಂದು ವೇಳೆ ಈ ಅಂಗಡಿಗಳು ಬಂದ್ ಆದರೆ ಜನರಿಗೆ ಆಹಾರ, ಔಷಧಿಗಳ ಲಭ್ಯತೆಯಲ್ಲಿ ಸಮಸ್ಯೆ ಸೃಷ್ಟಿಯಾಗಲಿದೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸಬೇಕು. ಸೀಲ್ ಡೌನ್ ಮಾಡಲು ಸರ್ಕಾರ ತೀರ್ಮಾನ ಮಾಡಿದ್ದೀಯಾ ? ಮಾಡುವುದಾದರೆ ಯಾವ ಜಿಲ್ಲೆಗಳಿಗೆ ಇದು ಅನ್ವಯ? ಸೀಲ್ ಡೌನ್ ಅವಧಿಯಲ್ಲಿ ಏನೆಲ್ಲ ಲಭ್ಯವಿರುತ್ತದೆ, ಏನು ಲಭ್ಯವಿರುವುದಿಲ್ಲ ಎಂಬುದರ ಬಗ್ಗೆ ಸರ್ಕಾರ ಕೂಡಲೇ ಅಧಿಕೃತವಾಗಿ ಮಾಹಿತಿ ನೀಡಬೇಕು. ಇಲ್ಲವಾದಲ್ಲಿ ಗಾಳಿ ಸುದ್ದಿಗಳು, ಸುಳ್ಳು ಮಾಹಿತಿಗಳು ಜನರ ದಿಕ್ಕು ತಪ್ಪಿಸಲಿವೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.








