ಪ್ರಪಂಚದಾದ್ಯಂತ ಕೊರೋನಾ ಸೋಂಕು ತೀವ್ರವಾಗಿ ವ್ಯಾಪಿಸಿದ್ದು ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ. ಈ ಸಮಯದಲ್ಲಿ ಇಡೀ ಜಗತ್ತೇ ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಮಲೇರಿಯಾದ ಔಷಧಿಯನ್ನು ತಮ್ಮ ರಾಷ್ಟ್ರಕ್ಕೆ ಕಳುಹಿಸಿ ಕೊಡುವಂತೆ ಭಾರತವನ್ನು ಕೋರಿಕೊಂಡಿದೆ. ಕೊರೋನಾ ಸೋಂಕಿಗೆ ಇಲ್ಲಿಯವರೆಗೆ ಯಾವುದೇ ಔಷಧವನ್ನು ಕಂಡುಹಿಡಿದಿಲ್ಲವಾದರೂ, ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಮಾತ್ರೆ ಪರಿಣಾಮಕಾರಿಯಾಗಿದೆ ಎಂದು ಅಧ್ಯಯನಗಳು ತಿಳಿಸಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಈ ಔಷಧವನ್ನು ಮೊಟ್ಟ ಮೊದಲು ಉತ್ಪಾದಿಸಿದ ಹಿರಿಮೆ, ಭಾರತದ ರಸಾಯನ ಶಾಸ್ತ್ರ ಪಿತಾಮಹ, ಭಾರತದ ಮೊದಲ ಆಧುನಿಕ ರಸಾಯನ ಶಾಸ್ತ್ರ ಅನ್ವೇಷಣಾಕಾರ ಆಚಾರ್ಯ ಸರ್ ಪ್ರಫುಲ್ಲಾ ಚಂದ್ರ ರಾಯ್ ಸ್ಥಾಪಿಸಿದ ಬಂಗಾಳ ಕೆಮಿಕಲ್ಸ್ ಆಂಡ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (ಬಿಸಿಪಿಎಲ್)ಗೆ ಸಲ್ಲುತ್ತದೆ.
ಆಚಾರ್ಯ ಸರ್ ಪ್ರಫುಲ್ಲಾ ಚಂದ್ರ ರಾಯ್ ಒಬ್ಬ ಬೆಂಗಾಲಿ ರಸಾಯನಶಾಸ್ತ್ರಜ್ಞ, ಶಿಕ್ಷಕ ಮತ್ತು ವಾಣಿಜ್ಯೋದ್ಯಮಿಯಾಗಿದ್ದರು. ಇವರು ಭಾರತದ ಮೊದಲ ಔಷಧಿ ಕಂಪೆನಿಯಾಗಿದ್ದ ಬಂಗಾಳ ಕೆಮಿಕಲ್ಸ್ ಮತ್ತು ಫಾರ್ಮಾಸ್ಯುಟಿಕಲ್ಸ್ ಸಂಸ್ಥಾಪಕರಾಗಿದ್ದರು. 1861 ಆಗಸ್ಟ್ 2 ರಂದು ಅಂದು ಭಾರತದ ಭಾಗವಾಗಿದ್ದ, ಇಂದಿನ ಬಾಂಗ್ಲಾದೇಶದ ಖುಲ್ನಾ ಜಿಲ್ಲೆಯ ರಾರುಲಿ ಕಟಿಪಾರದಲ್ಲಿ ಜನಿಸಿದ ಪ್ರಫುಲ್ಲಾ ಚಂದ್ರ ರಾಯ್ ರ ತಂದೆ ಹರೀಶ್ ಚಂದ್ರ ರಾಯ್ ಭೂಮಿ ಮಾಲೀಕರಾಗಿದ್ದರು. 1870 ರಲ್ಲಿ ಅವರ ಕುಟುಂಬವು ಕೊಲ್ಕತ್ತಾಕ್ಕೆ ವಲಸೆ ಬಂದಿತು.
1879 ರಲ್ಲಿ ಅವರು ಪ್ರವೇಶ ಪರೀಕ್ಷೆಯನ್ನು ಪಾಸಾಗಿ ಪಂಡಿತ್ ಈಶ್ವರ ಚಂದ್ರ ವಿದ್ಯಾಸಾಗರ್ ಸ್ಥಾಪಿಸಿದ ಮೆಡಿಪಾಲಿಟನ್ ಇನ್‌ಸ್ಟಿಟ್ಯೂಟ್ ಗೆ ಪ್ರವೇಶ ಪಡೆದರು. ಆ ಸಮಯದಲ್ಲಿ ಪ್ರಫುಲ್ಲಾ ಚಂದ್ರ ರಾಯ್ ಬಾಹ್ಯ ವಿದ್ಯಾರ್ಥಿಯಾಗಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಉಪನ್ಯಾಸಗಳಿಗೆ ಹಾಜರಾಗುತ್ತಿದ್ದರು. ಅಲ್ಲಿ ಅವರು ಪ್ರಾಧ್ಯಾಪಕ ಅಲೆಕ್ಸಾಂಡರ್ ಪೆಡ್ಲರ್ ರ ರಸಾಯನಶಾಸ್ತ್ರದ ಕೋರ್ಸುಗಳಿಂದ ವಿಶೇಷವಾಗಿ ಆಕರ್ಷಿಸಲ್ಪಟ್ಟಿದ್ದರು. ಪದವಿ ಪೂರ್ಣಗೊಳಿಸಿದ ಪ್ರಫುಲ್ಲಾ ಚಂದ್ರ ಬ್ರಿಟನ್ ಗೆ ತೆರಳಿ, ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಗೆ ಸೇರಿಕೊಂಡರು. ಅಲ್ಲಿ ಅವರು ಇತರ ವಿಷಯಗಳ ಜೊತೆ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರವನ್ನು ಅಧ್ಯಯನ ಮಾಡಿದರು. ಎಡಿನ್ಬರ್ಗ್ ವಿಶ್ವವಿದ್ಯಾನಿಲಯದಿಂದ ತನ್ನ ಬಿಎಸ್ಸಿ ಪದವಿಯನ್ನು ಪಡೆದುಕೊಂಡ ಪ್ರಫುಲ್ಲಾ ಚಂದ್ರ, ಅದೇ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್ ಪ್ರಬಂಧವನ್ನು (ಡಿಎಸ್ಸಿ) ಪ್ರಾರಂಭಿಸಿದರು ಮತ್ತು 1887 ರಲ್ಲಿ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದರು. ಅಲ್ಲಿ ಅವರು ಹೋಪ್ ಪ್ರಶಸ್ತಿಗೆ ಭಾಜನರಾದರು ಮತ್ತು ಇದು ಅವರ ಡಾಕ್ಟರೇಟ್ ಪೂರ್ಣಗೊಂಡ ಬಳಿಕದ ಒಂದು ವರ್ಷದ ನಂತರದ ಅವಧಿಯವರೆಗೆ ತನ್ನ ಸಂಶೋಧನೆಯ ಮೇಲೆ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿತು.
1888ರ ಆಗಸ್ಟ್ ಮೊದಲ ವಾರದಲ್ಲಿ ಭಾರತಕ್ಕೆ ಮರಳಿದ ಪ್ರಫುಲ್ಲಾ ಚಂದ್ರ,1889 ರಲ್ಲಿ ಕಲ್ಕತ್ತಾದ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ರಸಾಯನ ಶಾಸ್ತ್ರದ ತಾತ್ಕಾಲಿಕ ಸಹಾಯಕ ಪ್ರೊಫೆಸರ್ ಆಗಿ ಸೇರಿದರು. 1892 ರ ಸಮಯದಲ್ಲಿ ಅವರು ಬಂಗಾಳ ಕೆಮಿಕಲ್ಸ್ ಮತ್ತು ಫಾರ್ಮಾಸ್ಯುಟಿಕಲ್ ಎಂಬ ಕಂಪನಿಯನ್ನು ಪ್ರಾರಂಭಿಸಿದರು ಮತ್ತು ಕೋಲ್ಕತ್ತಾದಲ್ಲಿ ನಡೆದ ಭಾರತೀಯ ವೈದ್ಯಕೀಯ ಕಾಂಗ್ರೆಸ್ 1893 ಅಧಿವೇಶನಕ್ಕೆ ಮುಂಚಿತವಾಗಿ ಅದರ ಗಿಡಮೂಲಿಕೆ ಉತ್ಪನ್ನಗಳನ್ನು ಪ್ರಸ್ತುತಪಡಿಸಿದರು. 1896 ರಲ್ಲಿ ಹೊಸ ರಾಸಾಯನಿಕ ಸಂಯುಕ್ತವನ್ನು ತಯಾರಿಸಲು ಮರ್ಕ್ಯುರಸ್ ನೈಟ್ರೇಟ್ ಎಂಬ ಒಂದು ವರದಿಯನ್ನು ಪ್ರಕಟಿಸಿದರು. ಇದು ನೈಟ್ರೈಟ್ಸ್ ಮತ್ತು ವಿಭಿನ್ನ ಲೋಹಗಳಾದ ಹೈಪೋನಿಟ್ರೈಟ್ಸ್ ಮತ್ತು ಅಮೋನಿಯಾ ಮತ್ತು ಸಾವಯವ ಅಮೈನ್ಗಳ ನೈಟ್ರೈಟ್ಗಳ ಮೇಲೆ ಹೆಚ್ಚಿನ ಸಂಖ್ಯೆಯ ತನಿಖಾ ವರದಿಗೆ ದಾರಿ ಮಾಡಿಕೊಟ್ಟಿತು.
1901ರ ಸಮಯದಲ್ಲಿ ಪ್ರಫುಲ್ಲಾ ಚಂದ್ರ ಬಂಗಾಳ ಕೆಮಿಕಲ್ಸ್ ಮತ್ತು ಫಾರ್ಮಾಸ್ಯುಟಿಕಲ್ ಕಂಪನಿಯನ್ನು ಬಂಗಾಳ ಕೆಮಿಕಲ್ಸ್ ಮತ್ತು ಫಾರ್ಮಾಸ್ಯುಟಿಕಲ್ ವರ್ಕ್ಸ್ ಪ್ರೈವೇಟ್ ಲಿಮಿಟೆಡ್ ಆಗಿ ಪರಿವರ್ತಿಸಿದರು. 1908ರ ಹೊತ್ತಿಗೆ ಬಂಗಾಳದ ಕೈಗಾರಿಕಾ ವಲಯದಲ್ಲಿ ತನ್ನ ಛಾಪು ಮೂಡಿಸಿದ ಇವರ ಉಸ್ತುವಾರಿಯಲ್ಲಿ ಬಂಗಾಳ ಕೆಮಿಕಲ್ಸ್ ವೇಗವಾಗಿ ಬೆಳೆಯಿತು.
1916 ರಲ್ಲಿ ಪ್ರೆಸಿಡೆನ್ಸಿ ಕಾಲೇಜಿನಿಂದ ನಿವೃತ್ತರಾದ ಪ್ರಫುಲ್ಲಾ ಚಂದ್ರ, ನಂತರ ಕಲ್ಕತ್ತಾ ವಿಶ್ವವಿದ್ಯಾನಿಲಯ ಕಾಲೇಜ್ ಆಫ್
ಸೈನ್ಸ್ ಗೆ ಮೊದಲ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿ ಸೇರಿದರು. ಇಲ್ಲಿ ಅವರು ತಮ್ಮ ತಂಡದೊಂದಿಗೆ ಚಿನ್ನ, ಪ್ಲಾಟಿನಮ್, ಇರಿಡಿಯಮ್ ಇತ್ಯಾದಿಗಳನ್ನು ಮೆರೆಕ್ಯಾಪ್ಲ್ ರಾಡಿಕಲ್ ಮತ್ತು ಸಾವಯವ ಸಲ್ಫೈಡ್ಸ್ನೊಂದಿಗೆ
ಸೇರಿಸಿ ವಿವಿಧ ಸಂಶೋಧನೆಗಳನ್ನು ಮಾಡಲು ಪ್ರಾರಂಭಿಸಿದರು. ಜರ್ನಲ್ ಆಫ್ ದಿ ಇಂಡಿಯನ್ ಕೆಮಿಕಲ್ ಸೊಸೈಟಿಯಲ್ಲಿ ಇವರು ಹಲವಾರು ಕೃತಿಗಳನ್ನು ಪ್ರಕಟಿಸಿದ್ದು, ‘ಹಿಂದೂ ರಸಾಯನಶಾಸ್ತ್ರದ ಇತಿಹಾಸ – ಕ್ರಿ.ಶ. ಹದಿನಾರನೇ ಶತಮಾನದ ಮಧ್ಯಭಾಗದವರೆಗೆ’ ಎಂಬ ಕೃತಿಯಲ್ಲಿ ವೈದಿಕ ಯುಗದಿಂದ ಪ್ರಾರಂಭವಾಗುವ ಭಾರತದ ಸ್ಥಳೀಯ ರಾಸಾಯನಿಕ ಪದ್ಧತಿಗಳನ್ನು ದಾಖಲಿಸಿದ್ದಾರೆ.
1921 ರಲ್ಲಿ ತನ್ನ 60 ನೇ ವರ್ಷ ಪೂರ್ಣಗೊಂಡ ನಂತರ, ತಮ್ಮ ಸಂಪೂರ್ಣ ಸಂಬಳವನ್ನು ಕಲ್ಕತ್ತಾ ವಿಶ್ವವಿದ್ಯಾನಿಲಯದ ಯುನಿವರ್ಸಿಟಿ ಕಾಲೇಜ್ ಆಫ್ ಸೈನ್ಸ್ ನಲ್ಲಿನ ರಾಸಾಯನಿಕ ಸಂಶೋಧನೆಯ ಮುಂದುವರೆಸುವಿಕೆಗಾಗಿ ನೀಡಿದರು.1920 ರ ವೇಳೆಗೆ ರಸಾಯನ ಶಾಸ್ತ್ರದ ಎಲ್ಲಾ ಶಾಖೆಗಳಲ್ಲಿ ಅವರು 107 ವರದಿಗಳನ್ನು ಬರೆದ ಪ್ರಫುಲ್ಲಾ ಚಂದ್ರ ರಾಯ್ 1924 ರಲ್ಲಿ ಹೊಸ ಇಂಡಿಯನ್ ಸ್ಕೂಲ್ ಆಫ್ ಕೆಮಿಸ್ಟ್ರಿ ಆರಂಭಿಸಿದರು. 1936ರಲ್ಲಿ, 75 ವರ್ಷದ ಪ್ರಫುಲ್ಲಾ ಚಂದ್ರರವರು ತಮ್ಮ ಎಲ್ಲಾ ಸಕ್ರಿಯ ಸೇವೆಯಿಂದ ನಿವೃತ್ತರಾದರು ಮತ್ತು ಜೂನ್ 16, 1944 ರಂದು ತಮ್ಮ 82 ನೇ ವಯಸ್ಸಿನಲ್ಲಿ ನಿಧನರಾದರು.
ಬಂಗಾಳ ಕೆಮಿಕಲ್ಸ್ & ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ (ಬಿಸಿಪಿಎಲ್) ಭಾರತದಲ್ಲಿ ಮಲೇರಿಯಾ ವಿರೋಧಿ ಔಷಧವನ್ನು ಉತ್ಪಾದಿಸುವ ಏಕೈಕ ಸಾರ್ವಜನಿಕ ವಲಯದ (ಪಿಎಸ್‌ಯು) ಸಂಸ್ಥೆಯಾಗಿದ್ದು, ದಶಕಗಳ ಹಿಂದೆ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದನೆಯನ್ನು
ನಿಲ್ಲಿಸಿದೆ.