ಕಾಸರಗೋಡು ಜಿಲ್ಲೆಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣ ವಲಯಗಳಲ್ಲಿ ಪೊಲೀಸರು ಜಾರಿಗೊಳಿಸಿದ್ದ ಡಬಲ್ ಲಾಕ್ ಡೌನ್ ನ ಬದಲು ಏಪ್ರಿಲ್ 11ರಿಂದ ಟ್ರಿಪಲ್ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಪಳ್ಳಿಕ್ಕರೆ, ಉದುಮ, ಚೆಮ್ನಾಡ್ , ಚೆಂಗಳ, ಮಧೂರು, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ , ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲೂ ಪೊಲೀಸರು ಟ್ರಿಪ್ಪಲ್ ಲಾಕ್ ಡೌನ್ ಅನ್ನು ಜಾರಿಗೆ ತಂದಿದ್ದು, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 5 ಕೊರೊನಾ ನಿಯಂತ್ರಣ ವಲಯಗಳಾಗಿಸಿ ಟ್ರಿಪ್ಪಲ್ ಲಾಕ್ ಡೌನ್ ಜಾರಿಗೊಳಿಸಲಾಗಿದೆ.
5 ಕೊರೊನಾ ನಿಯಂತ್ರಣ ವಲಯ :
1. ಕೊರೊನಾ ನಿಯಂತ್ರಣ ವಲಯ ಒಂದು: ತಳಂಗರೆ, ನೆಲ್ಲಿಕುಂಜೆ ಪ್ರದೇಶಗಳು.
2. ಕೊರೊನಾ ನಿಯಂತ್ರಣ ವಲಯ ಎರಡು: ಎರಿಯಾಲ್, ಮಂಜತ್ತಡ್ಕ ಪ್ರದೇಶ.
3. ಕೊರೊನಾ ನಿಯಂತ್ರಣ ವಲಯ ಮೂರು: ಅಣಂಗೂರು, ಕೊಲ್ಲಂಪಾಡಿ, ಚಾಲ ಪ್ರದೇಶಗಳು.
4. ಕೊರೊನಾ ನಿಯಂತ್ರಣ ವಲಯ ನಾಲ್ಕು: ಚೆರ್ಕಳ, ಚೆಂಗಳ, ಬೇವಿಂಜೆ, ತೆಕ್ಕಿಲ್ ಫೆರಿ, ಚೇರೂರು ಪ್ರದೇಶ.
5. ಕೊರೊನಾ ನಿಯಂತ್ರಣ ವಲಯ ಐದು: ಕಳನಾಡು, ಚೆಂಬರಿಕ್ಕ ಬಝಾರ್, ನಲಾಂವಾದುಕಲ್, ಉದುಮಾ, ಮೂತ್ತಲ ಮಾಂಗಾಡ್, ಮುಲ್ಲಚ್ಚೇರಿ, ಇಯ್ಯಾಳ.
ಟ್ರಿಪಲ್ ಲಾಕ್ ಡೌನ್ ಪ್ರದೇಶಗಳಲ್ಲಿ ಮನೆಗಳಿಂದ ಹೊರಗೆ ಕಾಲಿಡುವವರನ್ನು ಬಂಧಿಸಲು ಫ್ಲೈಯಿಂಗ್ ಸ್ಕ್ವಾಡ್ ಮತ್ತು ಬೈಕ್ ಪೆಟ್ರೋಲಿಂಗ್, ಡ್ರೋನ್ ಗಳ ನಿಗಾ ಪ್ರಬಲಗೊಳಿಸಲಾಗಿದೆ. ಕೊರೊನಾ ನಿಯಂತ್ರಣ ವಲಯಗಳಲ್ಲಿ ತಲಾ 10 ಮನೆಗಳನ್ನು ಕೇಂದ್ರೀಕರಿಸಿ ಪೊಲಿಸ್ ಭದ್ರತೆ ಬಿಗಿಗೊಳಿಸಲಾಗಿದ್ದು, ಒಬ್ಬ ಪೊಲೀಸ್ ಪೂರ್ಣಾವಧಿ ನಿಗಾ ಇರಿಸಲಾಗಿದೆ.
ಟ್ರಿಪ್ಪಲ್ ಲಾಕ್ ಡೌನ್ ಪ್ರದೇಶಗಳಲ್ಲಿ ಜನರು ಮನೆಗಳಿಂದ ಹೊರಗಿಳಿಯುವಂತಿಲ್ಲ. ಆದೇಶ ಉಲ್ಲಂಘಿಸಿ ಮನೆಯಿಂದ ಹೊರಗಿಳಿದವರನ್ನು, ಸರಕಾರಿ ನಿಗಾದಲ್ಲಿರಿಸಿ ಅವರ ವಿರುದ್ಧ ಕಾನೂನಿನ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ತಳಂಗರೆಯಲ್ಲಿ ಐ.ಜಿ. ವಿಜಯ್ ಸಖಾರೆ ಅವರು ಟ್ರಿಪ್ಪಲ್ ಲಾಕ್ ಡೌನ್ ಆದೇಶಕ್ಕೆ ಚಾಲನೆ ನೀಡಿದ್ದಾರೆ. ಉತ್ತರ ವಲಯ ಐ.ಜಿ. ಅಶೋಕ್ ಯಾದವ್, ಪೊಲೀಸ್ ವರಿಷ್ಠಾಧಿಕಾರಿ ಪಿ.ಎಸ್.ಸಾಬು, ಡಿ.ವೈ.ಎಸ್.ಪಿ. ಬಾಲಕೃಷ್ಣನ್, ಎಸ್.ಐ.ನಳಿನಾಕ್ಷನ್ ನೇತೃತ್ವ ವಹಿಸಿದ್ದಾರೆ.








