ಖತರ್ನಾಕ್ ವ್ಯಕ್ತಿ ಇನ್ ಸ್ಟಾಗ್ರಾಂ ಬಳಸಿಕೊಂಡು ಮದ್ಯ ಮಾರಾಟ ಮಾಡುತ್ತಿದ್ದ. ಇದೀಗ ಈ ಆಸಾಮಿ ಪೊಲೀಸರ ಅತಿಥಿ ಆಗಿದ್ದಾನೆ. ಕೊರೊನಾ ವೈರಸ್ ಭೀತಿಯಿಂದ ದೇಶವನ್ನು ಲಾಕ್ ಡೌನ್ ಮಾಡಲಾಗಿದೆ. ಇದರಿಂದಾಗಿ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇದೆ ಸಂದರ್ಭವನ್ನು ಬಳಿಸಿಕೊಂಡ ಈ ಭೂಪ ಮದ್ಯವನ್ನು ಒಂದಕ್ಕೆ ಮೂರು ಪಟ್ಟು ಜಾಸ್ತಿ ಬೆಲೆ ನಿಗದಿ ಮಾಡುತ್ತಿದ್ದ. ಇನ್ ಸ್ಟಾಗ್ರಾಂ ನಲ್ಲಿ ಇತನನ್ನು ಸಂಪರ್ಕ ಮಾಡಿದವರಿಗೆ ಮಾತ್ರ ಮದ್ಯ ಮಾರಾಟ ಮಾಡುತ್ತಿದ್ದ, ಗಿರಾಕಿ ಪಕ್ಕಾ ಆದ ಮೇಲೆ ಅವರಿಂದ ಗೂಗಲ್ ಪೆ, ಫೋನ್ ಪೆ ಮೂಲಕ ಹಣ ಹಾಕಿಸಿಕೊಳ್ಳುತ್ತಿದ್ದನು. ಹಣ ಬಂದ ಬಳಿಕವೇ ಮದ್ಯದ ಬಾಟಲಿಯನ್ನು ಡೆಲಿವೆರಿ ಮಾಡುತ್ತಿದ್ದ.
ವಿಭಿನ್ನ ಸ್ಟೈಲ್ ನಲ್ಲಿ ವ್ಯಾಪಾರ ಮಾಡುತ್ತಿದ್ದ ಕಿಲಾಡಿ
ಈ ಆಸಾಮಿ ಹೆಚ್ಚು ವಿಜಯನಗರ, ಆರ್ಪಿಸಿ ಲೆಔಟ್ ಪ್ರದೇಶಗಳನ್ನೇ ಡೆಲಿವರಿಗೆ ಆಯ್ಕೆ ಮಾಡಿಕೊಂಡಿದ್ದನು. ಹೋಗುವ ಮುನ್ನ ಆ ಪ್ರದೇಶಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂಬುದು ಖಚಿತ ಪಡಿಸಿಕೊಳ್ಳುತ್ತಿದ್ದ. ಇದು ಪಕ್ಕಾ ಆದ ಬಳಿಕ ಯಾರು ಇಲ್ಲದ ಪ್ರದೇಶ ಆಯ್ಕೆ ಮಾಡಿ, ಅಲ್ಲಿ ಮದ್ಯದ ಬಾಟಲಿ ಇಡುತ್ತಿದ್ದನು. ಬಾಟಲಿ ಮೇಲೆ ಪೇಪರ್ ಹೊದಿಸಿ ಅದು ಹಾರಿ ಹೋಗದಂತೆ ಅದರ ಮೇಲೆ ಕಲ್ಲ ಇಟ್ಟು ದೂರ ನಿಲ್ಲುತ್ತಿದ್ದನು. ಲೋಕೆಶನ್ ಬಳಿ ಗಿರಾಕಿ ಬಂದಿರುವುದನ್ನು ದೂರದಲ್ಲಿ ನಿಂತು ಗಮನಿಸುತ್ತಿದ್ದ. ಗಿರಾಕಿ ಒಬ್ಬರೇ ಇರುವುದು ಪಕ್ಕಾ ಆದ ಮೇಲೆ ಬಾಟಲಿ ಇಟ್ಟ ಪ್ರದೇಶದ ಲೋಕೆಶನ್ ಸೆಂಡ್ ಮಾಡುತ್ತಿದ್ದ. ಆಮೇಲೆ ಗಿರಾಕಿ ಬಾಟಲ್ ತೆಗೆದುಕೊಂಡು ಹೋಗೋದನ್ನು ನೋಡಿ ಅಲ್ಲಿಂದ ತೆರಳುತ್ತಿದ್ದ
ಮೂರನೇ ಪ್ರಯತ್ನಕ್ಕೆ ಸಿಕ್ಕ ಖದೀಮ
ಇನ್ ಸ್ಟಾಗ್ರಾಂ ಬಳಸಿಕೊಂಡು ಮದ್ಯ ಮಾರಾಟ ಮಾಡುವ ಮಾಹಿತಿ ಅಬಕಾರಿ ಇಲಾಖೆ ಬರುತ್ತದೆ. ಇಲಾಖೆಯ ಅಧಿಕಾರಿಗಳು ತಂಡವೊಂದನ್ನ ರಚಿಸಿಕೊಂಡು ಗಿರಾಕಿಯಾಗಿ ಈತನ ಬಳಿ ಮಾತನಾಡುತ್ತಾರೆ. ಮೊದಲು, ಅಧಿಕಾರಿಗಳಿಗೆ ಕೊಡಬೇಕಿದ್ದ ಬಾಟಲ್ನ್ನು ಅಧಿಕ ದರಕ್ಕೆ ಬೇರೆಯವರಿಗೆ ಮಾರಾಟ ಮಾಡುತ್ತಾನೆ. ಈ ಮೂಲಕ ಅಧಿಕಾರಿಗಳ ಮೊದಲ ಪ್ರಯತ್ನ ವಿಫಲವಾಗುತ್ತದೆ. ಇದಾದ ಎರಡು ದಿನಗಳ ಬಳಿಕ ಈ ಚಾಲಾಕಿ ಮದ್ಯ ವ್ಯಾಪಾರಿ ಇನ್ಸ್ಟಾಗ್ರಾಂನಲ್ಲಿ ಬಾಟಲ್ವೊಂದರ ಫೋಟೋ ಹಾಕಿದ್ದಾನೆ. ಆಗ ಅಧಿಕಾರಿಗಳು ವ್ಯಾಪಾರ ಕುದುರಿಸುತ್ತಾರೆ. ಆದರೆ ಈ ಬಗ್ಗೆ ಸಂಶಯ ಬಂದು ವ್ಯವಹಾರವನ್ನು ಸ್ಟಾಪ್ ಮಾಡ್ತಾನೆ. ಇದರಿಂದಾಗಿ ಅಧಿಕಾರಗಳ ಎರಡನೇ ಪ್ರಯತ್ನವು ವಿಫಲವಾಗುತ್ತದೆ.
ಅಧಿಕಾರಗಳು ಎಂದು ಕಂಡು ಹಿಡಿದ್ದು ಹೇಗೆ
ತನ್ನನ್ನು ಸಂಪರ್ಕ ಮಾಡುತ್ತಿರುವವರು ಅಬಕಾರಿ ಇಲಾಖೆಯವರು ಎಂದು ತಿಳಿಯುತ್ತಿದ್ದ. ತಂತ್ರಜ್ಞಾನದ ಸಂಪೂರ್ಣ ಲಾಭ ಪಡೆಯುವ ಈತ, ಗಿರಾಕಿ ಮಾತನಾಡುವ ನಂಬರ್ನ್ನು ಟ್ರು ಕಾಲರ್ ಆಪ್ನಲ್ಲಿ ಹಾಕಿ ಅವರ ಹೆಸರು, ಮಾಹಿತಿ ತಿಳಿಯುತ್ತಿದ್ದ. ಆಗ ಗಿರಾಕಿಗಳ ನಂಬರ್ ಅಧಿಕಾರಿಗಳ ಅಥವಾ ಇಲಾಖೆ ಹೆಸರಿನಲ್ಲಿ ತೋರಿಸಿದರೆ ಅಲ್ಲಿಗೆ ವ್ಯವಹಾರ ಬಂದ್ ಮಾಡಿ ಫೋನ್ ಸ್ವಿಚ್ ಆಫ್ ಮಾಡಿ ಸುಮ್ಮನೆ ಇರುತ್ತಿದ್ದ.
ಅಧಿಕಾರಿಗಳಿಂದ ಮಾಸ್ಟರ್ ಪ್ಲ್ಯಾನ್
ಹೀಗೆ ಅಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿ ಆಗುತ್ತಿದ್ದ ಖದೀಮನನ್ನು ಬಂಧಿಸಲು ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ ಮಾಡ್ತಾರೆ. ಬೆಂಗಳೂರು ಪಶ್ಚಿಮ ವಲಯ ಅಬಕಾರಿ ಉಪ ಆಯುಕ್ತ ಬಿ.ಆರ್. ಹಿರೇಮಠ್ ನೇತೃತ್ವದಲ್ಲಿ, ಅಬಕಾರಿ ಅಧೀಕ್ಷಕರಾದ ವನಜಾಕ್ಷಿ ಎಂ. ಜೊತೆ ಸೇರಿ, ಬೇರೆ ನಂಬರ್ನಿಂದ ಮಾತಾಡಿ, ನಾವು ಉತ್ತರ ಭಾರತದವರು ಅಂತಾ ಪರಿಚಯ ಮಾಡಿಕೊಂಡರು. ಈ ವೇಳೆ ಅಧಿಕಾರಿಗಳು ಕಚೇರಿ ಅಥವಾ ಪೋಲೀಸ್ ಠಾಣೆ ಸಮೀಪದ ಲೋಕೇಶನ್ ಬಳಸದೇ, ತಮ್ಮ ಮನೆಯ ಸಮೀಪದ ಲೋಕೇಶನ್ ನಲ್ಲಿ ವ್ಯವಹಾರ ನಡೆಸಿದ್ದರು. ಗೂಗಲ್ ಪೆ ಮೂಲಕ ಹಣ ಹಾಕಿ ಈತ ಹೇಳಿದ ಪ್ರದೇಶದಲ್ಲಿ ಸಿವಿಲ್ ಡ್ರೆಸ್ನಲ್ಲಿ ಹೋಗುತ್ತಾರೆ. ಅಲ್ಲದೆ ಪ್ರದೇಶದ ಸುತ್ತಾ ಮುತ್ತಾ ಗೃಹಿಣಿಯರಂತೆ ಕಾಣುವ ಮಹಿಳಾ ಸಿಬ್ಬಂದಿಯನ್ನು, ತಳ್ಳು ಗಾಡಿಯವರೊಂದಿಗೆ ವಿಜಯನಗರ ಆಸುಪಾಸಿನಲ್ಲಿ ನಿಯೋಜಿಸಿದ್ದರು. ಇದನ್ನು ನಂಬಿದ ಚಾಲಾಕಿ ಎಂದಿನಂತೆ ದ್ವಿಚಕ್ರ ವಾಹನದಲ್ಲಿ ಬಂದು ಪ್ಲಾನ್ನಂತೆ ಬಾಟಲ್ ಇಟ್ಟು, ಒಂದು ಸ್ಥಳದಲ್ಲಿ ನಿಂತು ಗಮನಿಸುತ್ತಿರುತ್ತಾನೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ಕಿರಣ್ ಮೇಲೆ ದಾಳಿ ಮಾಡುತ್ತಾರೆ. ಬಳಿಕ ಇವನಿಂದ ಮದ್ಯ, ದ್ವಿಚಕ್ರ ವಾಹನ, ಫೋನ್ನ್ನ ವಶಪಡಿಸಿಕೊಂಡಿದ್ದಾರೆ, ಜೊತೆಗೆ ಇವನಿಗೆ ಗೂಗಲ್ ಪೇ, ಪೋನ್ ಪೆ ಮೂಲಕ ಹಣ ಹಾಕಿದವರ ಮಾಹಿತಿ ಪಡೆದಿದ್ದಾರೆ.








