ಡಿಕೆ ಶಿವಕುಮಾರ್ ಮಗಳನ್ನು ಒತ್ತೆಯಾಳಾಗಿ ಇರಿಸಿಕೊಂಡು ನೀಚ ರಾಜಕಾರಣ ಮಾಡುತ್ತಿದ್ದಾರೆ – ಯುವತಿಯ ಪೋಷಕರ ಆರೋಪ
ನನ್ನ ಅಕ್ಕನನ್ನು ಮುಂದಿಟ್ಟುಕೊಂಡು ಡಿ.ಕೆ. ಶಿವಕುಮಾರ್ ನೀಚ ರಾಜಕಾರಣ ಮಾಡುತ್ತಿದ್ದಾರೆ. ಅಕ್ಕನಿಗೆ ಡಿ.ಕೆ. ಶಿವಕುಮಾರ್ ದುಡ್ಡು ಕೊಟ್ಟು ಗೋವಾಗೆ ಕಳುಹಿಸಿದ್ದಾರೆ ಎಂದು ರಾಸಲೀಲೆ ಸಿಡಿ ಪ್ರಕರಣದ ಯುವತಿಯ ಸಹೋದರ ಗಂಭೀರ ಆರೋಪ ಮಾಡಿದ್ದಾರೆ.
ಎಸ್ ಐಟಿ ಅಧಿಕಾರಿಗಳ ವಿಚಾರಣೆಯ ನಂತರ ಯುವತಿಯ ತಂದೆ, ತಾಯಿ ಮತ್ತು ಸಹೋದರ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನನ್ನ ಅಕ್ಕನನ್ನು ಮುಂದಿಟ್ಟುಕೊಂಡು ಡಿ.ಕೆ. ಶಿವಕುಮಾರ್ ಹೊಲಸು ರಾಜಕಾರಣ ಮಾಡುತ್ತಿದ್ದಾರೆ ಎಂದು ಯುವತಿಯ ಸಹೋದರ ಆರೋಪಿಸಿದ್ದಾರೆ.
ನನ್ನ ಅಕ್ಕನೇ ಫೋನ್ ಮಾಡಿ ಡಿಕೆಶಿ ದುಡ್ಡು ಕೊಟ್ಟಿರುವುದನ್ನು ಹೇಳಿದ್ದಾಳೆ. ನೀವು ಗಂಡಸಾಗಿದ್ದರೆ ಕೂಡಲೇ ನಮ್ಮ ಅಕ್ಕನನ್ನು ಬಿಡಿ. ಎದುರು ಬದುರು ಹೋರಾಡಿ ಎಂದು ಯುವತಿಯ ಸಹೋದರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಡಿಕೆ ಶಿವಕುಮಾರ್ ತನ್ನ ಮಗಳನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಹೆಣ್ಣುಮಗಳನ್ನು ಇಟ್ಟುಕೊಂಡು ಯಾವ ರೀತಿಯ ರಾಜಕಾರಣ ಮಾಡುತ್ತಾರೆ ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.
ನಮ್ಮ ಬಳಿ ಇರುವ ಸಾಕ್ಷ್ಯಗಳನ್ನು ಅಧಿಕಾರಿಗಳಿಗೆ ನೀಡಿದ್ದೇವೆ. ನಮಗೆ ಯಾವುದೇ ಒತ್ತಡ ಇಲ್ಲ. ನಾವು ಯಾರ ಒತ್ತಡಕ್ಕೂ ಮಣಿದು ಹೇಳಿಕೆ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ನಾನೊಬ್ಬ ನಿವೃತ್ತ ಸೈನಿಕ. ನಮಗೆ ಯಾರ ರಕ್ಷಣೆಯ ಅವಶ್ಯಕತೆ ಇಲ್ಲ. ದೇಶ ಕಾಯುವವನಿಗೆ ಮಗಳ ರಕ್ಷಣೆ ಹೇಗೆ ಮಾಡಬೇಕು ಎಂದು ಗೊತ್ತಿದೆ. ನಮಗೆ ನಮ್ಮ ಮಗಳು ಮನೆಗೆ ಹಿಂದಿರುಗಬೇಕು. ಆಕೆಯನ್ನು ಮರಳಿ ಬರಲು ಪೊಲೀಸರು ಹಾಗೂ ಮಾಧ್ಯಮಗಳು ಸಹಾಯ ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.