ಬೆಂಗಳೂರು: ನಿಗದಿಯಂತೆ ಮಾಜಿ ಸಿಎಂ ಕುಮಾರಸ್ವಾಮಿ ಪುತ್ರ, ನಟ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಮದುವೆ ನಡೆಸಲು ದೊಡ್ಡಗೌಡ್ರ ಕುಟುಂಬ ಮುಂದಾಗಿದೆ.
ಏಪ್ರಿಲ್ 17 ರಂದು, ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಜೊತೆ ರೇವತಿ ಮದುವೆ ಮುಹೂರ್ತ ಫಿಕ್ಸ್ ಆಗಿತ್ತು. ರಾಮನಗರ ಹಾಗೂ ಚನ್ನಪಟ್ಟಣದ ಬಳಿ ಅದ್ಧೂರಿಯಾಗಿ ಮದುವೆ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ, ಕೊರೊನಾದಿಂದಾಗಿ ಇಡೀ ದೇಶವೇ ಲಾಕ್ಡೌನ್ ಆದ ಕಾರಣ ಕುಮಾರಸ್ವಾಮಿ ಅವರು ಪುತ್ರನ ವಿವಾಹ ಮುಹೂರ್ತವನ್ನು ಮುಂದೂಡಬೇಕಾ ಅಥವಾ ನಿಗದಿಯಂತೆ ನೆರವೇರಿಸಬೇಕಾ ಎಂಬ ಗೊಂದಲಕ್ಕೆ ಸಿಲುಕಿದ್ದರು. ನಿನ್ನೆ ಸಂಜೆ ತಂದೆ ದೇವೇಗೌಡರ ಜೊತೆಗೆ ಮಾತುಕತೆ ನಡೆಸಿ, ಕುಮಾರಸ್ವಾಮಿ ಅಂತಿಮ ನಿರ್ಧಾರ ತೆಗೆದುಕೊಂಡಿದ್ದಾರೆ.
ನಿನ್ನೆ ದೇವೇಗೌಡರನ್ನು ಭೇಟಿಯಾದ ಕುಮಾರಸ್ವಾಮಿಗೆ ಹೆಚ್ ಡಿಡಿ, ನಿಗದಿಯಂತೆ ಮದುವೆ ನಡೆಸಲು ಸೂಚಿಸಿದ್ದಾರೆ. ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಯಾರನ್ನೂ ಮುಹೂರ್ತ ಕಾರ್ಯಕ್ಕೆ ಆಹ್ವಾನಿಸುವುದು ಬೇಡ. ಮನೆಯ ಮಟ್ಟಿಗೆ ಮದುವೆ ಕಾರ್ಯ ನೆರವೇರಿಸೋಣ. ವಧು ರೇವತಿ ಮನೆಯಲ್ಲಿ ಎರಡು ಕುಟುಂಬಗಳ ಮುಖ್ಯ ಸದಸ್ಯರು ಮಾತ್ರ ಮದುವೆ ಕಾರ್ಯದಲ್ಲಿ ಭಾಗಿಯಾಗೋಣ. 50 ಜನ ಸೇರಿ ಮದುವೆ ಮುಹೂರ್ತ ನೆರವೇರಿಸೋಣ ಎಂದು ಹೇಳಿದ್ದಾರೆ.
ಲಾಕ್ಡೌನ್ ತೆರವಾದ ಬಳಿಕ ಬೆಂಗಳೂರಿನ ಅರಮನೆ ಮೈದಾನದಲ್ಲೋ ಅಥವಾ ನಿಗದಿಯಂತೆ ರಾಮನಗರ, ಚನ್ನಪಟ್ಟಣ ಮಧ್ಯೆ ಅದ್ಧೂರಿ ಸೆಟ್ ನಿರ್ಮಿಸಿ ಅಲ್ಲಿ ಆರತಕ್ಷತೆಯನ್ನು ಮಾಡಲು ಹೆಚ್ ಡಿಡಿ ಕುಟುಂಬ ತೀರ್ಮಾನಿಸಿದೆ.








