ದೆಹಲಿ: ಕೊರೊನಾಸುರನ ಹೊಡೆತಕ್ಕೆ ದೇಶದಲ್ಲಿ ಕಾರ್ಪೊರೇಟ್ ಕ್ಷೇತ್ರ ಕಂಗಾಲಾಗಿದೆ. ಲಾಕ್ ಡೌನ್ ಹಿನ್ನೆಲೆ ಈ ವಲಯದ ಮಾರ್ಕೆಟ್ ಕುಸಿದಿದೆ. ಪರಿಣಾಮ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಹಿತಾಸಕ್ತಿಗಳು, ಕುಸಿದಿರುವ ನಮ್ಮ ಕಾರ್ಪೊರೇಟ್ ಕಂಪನಿಗಳ ಷೇರುಗಳನ್ನು ಕೊಂಡುಕೊಳ್ಳುತ್ತಿವೆ. ಹೀಗೆ ವಿದೇಶಿ ಸಂಸ್ಥೆಗಳು ಖರೀದಿಸುವ ಷೇರುಗಳಿಂದ, ದೇಶಿ ಸಂಸ್ಥೆಗಳು ತಮ್ಮ ಸ್ವಾಯುತ್ತತೆಯನ್ನು ಕಳೆದುಕೊಳ್ಳುತ್ತವೆ ಎನ್ನುವ ಆತಂಕ ಷೇರುಮಾರುಕಟ್ಟೆಯ ವಲಯದಲ್ಲಿದೆ. ಹೀಗಾಗಿ ಇದನ್ನು ತಡೆಯಲು ನರೇಂದ್ರ ಮೋದಿ ಸರ್ಕಾರ ಮುಂದಾಗಬೇಕಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಕಳೆದ ವಾರ ಆರ್ಥಿಕ ಹಿಂಜರಿತದ ಪರಿಣಾಮವಾಗಿ, ಕಾರ್ಪೊರೇಟ್ ಕಂಪನಿಗಳ ಷೇರುಗಳು, ಖರೀದಿದಾರರಿಗೆ ಆಕರ್ಷಣೀಯವಾಗಿ ಕಾಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯು ಯಾವುದೇ ವಿದೇಶಿ ಸಂಸ್ಥೆಗಳು, ದೇಶಿ ಕಾರ್ಪೊರೇಟ್ ಸಂಸ್ಥೆಗಳನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
ಇತ್ತೀಚೆಗೆ ಚೀನಾದ ಪೀಪಲ್ಸ್ ಬ್ಯಾಂಕ್ ಆಫ್ ಚೀನಾವೂ, ಭಾರತದ ಹೆಚ್‌ಡಿಎಫ್‌ಸಿ ಬ್ಯಾಂಕ್ ನ ಶೇಕಡಾ 1.01 ರಷ್ಟು ಷೇರುಗಳನ್ನು ಖರೀದಿಸಿತ್ತು.








