ಕೆಂಪುಕೋಟೆ ಹಿಂಸಾಚಾರ ಪ್ರಕರಣ – ನಟ ದೀಪ್ ಸಿಧುಗೆ ಜಾಮೀನು ಮಂಜೂರು..!
ದೆಹಲಿ : ಗಣರಾಜ್ಯೋತ್ಸವ ದಿನದಂದು ದೆಹಲಿಯ ಕೆಂಪುಕೋಟೆಯಲ್ಲಿ ರೈತರ ಟ್ರ್ಯಾಕ್ಟರ್ ರ್ಯಾಲಿ ವೇಳೆ ನಡೆದ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನೆ ನೀಡದ ಆರೋಪದ ಮೇಲೆ ಅರೆಸ್ಟ್ ಆಗಿದ್ದ ನಟ ದೀಪ್ ಸಿಧುಗೆ ದೆಹಲಿಯ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಜನವರಿ 26ರಂದು ಕೆಂಪುಕೋಟೆಗೆ ತೆರಳುವಂತೆ ಪ್ರತಿಭಟನಾ ನಿರತ ರೈತರಿಗೆ ತಾವು ಯಾವುದೇ ಕರೆ ನೀಡಿರಲಿಲ್ಲ ಎಂದು ಕಳೆದ ವಿಚಾರಣೆ ವೇಳೆ ದೀಪ್ ಸಿಧು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು. ಅಲ್ಲದೆ, ಈ ರೀತಿ ಕರೆಯನ್ನು ರೈತ ಮುಖಂಡರೇ ನೀಡಿದ್ದರು. ತಾವು ಯಾವುದೇ ರೈತ ಸಂಘಟನೆಯ ಸದಸ್ಯರಲ್ಲ ಎಂದು ಹೇಳಿದ್ದರು.
ದೀಪ್ ಸಿಧು ಜನರನ್ನು ಗುಂಪುಗೂಡಿಸಿದ್ದರು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ ಎಂದು ಅವರ ವಕೀಲರು ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ದಾರೆ. ತಾವು ಒಂದೇ ಒಂದು ಹಿಂಸಾಚಾರದ ಕೃತ್ಯದಲ್ಲಿಯೂ ಭಾಗಿಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಫೇಸ್ಬುಕ್ನಲ್ಲಿ ವಿಡಿಯೋ ಹಾಕಿದ್ದು ಮತ್ತು ಅದು ಅಪರಾಧ ಅಲ್ಲ ಎಂದು ಪ್ರತಿಪಾದಿಸಿದ್ದು ತಾವು ಮಾಡಿದ ತಪ್ಪು ಎಂದು ದೀಪ್ ಸಿಧು ಒಪ್ಪಿಕೊಂಡಿದ್ದಾರೆ. ‘ನಾನು ವಿಡಿಯೋವನ್ನು ಪೋಸ್ಟ್ ಮಾಡಿದ್ದೆ ಅಷ್ಟೇ, ಅದು ನನ್ನ ತಪ್ಪು. ಎಲ್ಲ ತಪ್ಪುಗಳೂ ಅಪರಾಧವಲ್ಲ.
ನಾನು ವಿಡಿಯೋ ಹಂಚಿಕೊಂಡಿದ್ದೇನೆ ಎಂಬ ಕಾರಣಕ್ಕಾಗಿಯೇ ಮಾಧ್ಯಮಗಳು ನನ್ನನ್ನು ಮುಖ್ಯ ಆರೋಪಿ ಎಂದು ಬಿಂಬಿಸಿವೆ. ಮುಖ್ಯ ಸಂಚುಕೋರ ಎಂದು ನನ್ನನ್ನು ತೋರಿಸಿವೆ. ಇದು ಯಾಕೆಂದು ನನಗೆ ಗೊತ್ತಿಲ್ಲ’ ಎಂದು ಜಾಮೀನು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಹೇಳಿದ್ದಾರೆ.