ಪ್ರೇಯಸಿಯನ್ನು ಮೀಟ್ ಮಾಡುವುದು ಅಗತ್ಯವೇ.. ಆದ್ರೆ ಅದು ನಮ್ಮ ಅಗತ್ಯ ಸೇವೆಗಳ ಅಡಿ ಬರುವುದಿಲ್ಲ – ಯುವಕನ ಟ್ವೀಟ್ ಪೊಲೀಸರ ಉತ್ತರ..!
ಮುಂಬೈ: ಕರೊನಾ ಹಾವಳಿ ನಡುವೆ ಹಲವೆಡೆ , ನೈಟ್ ಕರ್ಫ್ಯೂ , ಸೆಮಿ ಲಾಕ್ ಡೌನ್ , ಲಾಕ್ ಡೌನ್ ಆಗಿದ್ದು, ಅದೆಷ್ಟೋ ಜನರು ಜೀವನಕ್ಕಾಗಿ ಪರದಾಡುತ್ತಿದ್ದಾರೆ. ಕೂಲಿ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇನ್ನೂ ಅನೇಕರು ನಾನಾ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ.
ಕೇವಲ ಅಗತ್ಯ ಸೇವೆಗಳಿಗಷ್ಟೇ ಅವಕಾಶ ನೀಡಲಾಗಿದೆ. ಆದ್ರೆ ಇಲ್ಲೊಬ್ಬ ಭೂಪ ತನ್ನ ಗರ್ಲ್ ಫ್ರೆಂಡ್ ಮೀಟ್ ಮಾಡೋದು ತುಂಬಾನೆ ಮುಖ್ಯ ಅದು ಕೂಡ ಅಗತ್ಯ ನಾನು ಯಾವ ಸ್ಟಿಕ್ಕರ್ ಹಾಕಿಕೊಂಡು ಬೈಕ್ ನಲ್ಲಿ ಪ್ರಯಾಣಿಸಬೇಕೆಂದು ಟ್ವೀಟ್ ಮಾಡಿದ್ದಾನೆ. ಇದಕ್ಕೆ ಮುಂಬೈ ಪೊಲೀಸರು ಖಡಕ್ ಆಗಿಯೇ ಆದ್ರೆ ವ್ಯಂಗ್ಯವಾಗಿ ಉತ್ತರ ನೀಡಿದ್ದಾರೆ.
ಹೌದು.. ಅಶ್ವೀನ್ ವಿನೋದ್ ಎನ್ನುವ ಯುವಕ ಟ್ವಿಟ್ಟರ್ನಲ್ಲಿ ಮುಂಬೈ ಪೊಲೀಸರಿಗೆ, ನಾನು ನನ್ನ ಪ್ರೇಯಸಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವಳನ್ನು ಭೇಟಿಯಾಗಬೇಕೆಂದರೆ ನಾನು ನನ್ನ ಬೈಕ್ ಗೆ ಯಾವ ಸ್ಟಿಕರ್ ಬಳಸಿಕೊಂಡು ಹೋಗಬೇಕು ಎಂದು ಕೇಳಿದ್ದಾನೆ.
ಇದಕ್ಕೆ ಮುಂಬೈ ಪೊಲೀಸ್ ಟ್ವಿಟ್ಟರ್ ನಿಂದ ಬಂದ ಉತ್ತರ ವೈರಲ್ ಆಗಿದೆ. ನೀವು ನಿಮ್ಮ ಪ್ರೇಯಸಿಯನ್ನು ಭೇಟಿಯಾಗಬೇಕು ಎಂಬುದು ನಿಮಗೆ ಅಗತ್ಯವಾದದ್ದಾಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಆದರೆ ದುರಾದೃಷ್ಟವಶಾತ್ ಇದು ನಮ್ಮ ಅಗತ್ಯ ಸೇವೆಗಳ ಅಡಿಯಲ್ಲಿ ಬರುವುದಿಲ್ಲ. ದೂರ ಇರುವಿಕೆ ಹೃದಯದ ಬೆಸುಗೆಯನ್ನು ಹತ್ತಿರಗೊಳಿಸುತ್ತದೆ.
ಈ ಸಮಯದಲ್ಲಿ ನೀವು ಆರೋಗ್ಯದಿಂದ ಇರುವುದೇ ಲೇಸು. ನೀವು ಜೀವನಪೂರ್ತಿ ಚೆನ್ನಾಗಿರಬೇಕು. ಇದು ತಾತ್ಕಾಲಿಕ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದು, ಈ ಟ್ವೀಟ್ ಈಗ ಭಾರೀ ವೈರಲ್ ಆಗಿದೆ.