ಉತ್ತರಾಖಂಡ್ ನಲ್ಲಿ ಮತ್ತೊಮ್ಮೆ ಹಿಮಸ್ಫೋಟ : 8ಕ್ಕಿಂತ ಅಧಿಕ ಮಂದಿ ಸಾವು – 438 ಜನರ ರಕ್ಷಣೆ
ಉತ್ತರಾಖಂಡ್ ನ ಚಿಮೊಲಿ ಜಿಲ್ಲೆಯಲ್ಲಿ ಶುಕ್ರವಾರ ಮತ್ತೊಮ್ಮೆ ಹಿಮಸ್ಫೋಟ ಸಂಭವಿಸಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದು, 438 ಮಂದಿಯನ್ನು ರಕ್ಷಿಸಲಾಗಿದೆ.
ಹಿಮಪಾತಕ್ಕೆ ಉತ್ತರಾಖಂಡ ಮತ್ತೊಮ್ಮೆ ನಲುಗಿದೆ. ಚಮೋಲಿ ಜಿಲ್ಲೆಯ ಇಂಡೋ -ಚೀನಾ ಗಡಿಯಲ್ಲಿ ಹಿಮಪಾತವಾಗಿ 8 ಮಂದಿ ಮೃತಪಟ್ಟಿದ್ದಾರೆ. ಸುಮ್ನಾದಲ್ಲಿ ಹಿಮನದಿ ಕುಸಿತದಿಂದ ಈ ಅವಘಡ ಸಂಭವಿಸಿದೆ.
ಕೆಲವು ತಿಂಗಳ ಹಿಂದೆಯಷ್ಟೇ ಅನಿರೀಕ್ಷಿತವಾಗಿ ಹಿಮಸ್ಫೋಟ ಸಂಭವಿಸಿ ನೂರಾರು ಮಂದಿ ನಾಗರಿಕರು ಅಸುನೀಗಿದ್ದರು. ಇದರ ಬೆನ್ನಲ್ಲೇ ಶುಕ್ರವಾರ ಮತ್ತೊಂದು ಹಿಮ ಸ್ಫೋಟ ಸಂಭವಿಸಿದೆ.
ಭಾರತೀಯ ಸೇನೆ ಕ್ಷಿಪ್ರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, 430 ಮಂದಿಯನ್ನು ರಕ್ಷಿಸಿದ್ದಾರೆ. 8 ಮೃತದೇಹಗಳು ಪತ್ತೆಯಾಗಿದ್ದು, 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಉತ್ತರಾಖಂಡ ಸಿಎಂ ಘಟನೆ ಬಗ್ಗೆ ಟ್ವೀಟ್ ಮಾಡಿದ್ದು, ಸ್ಥಳೀಯ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದ್ದಾರೆ. ಹಾಗೇ, ಗೃಹ ಸಚಿವರು ಕರೆ ಮಾಡಿ ಸ್ಥಳದ ಪರಿಸ್ಥಿತಿ ಬಗ್ಗೆ ವರದಿ ಪಡೆದಿದ್ದಾರೆ. ಎಲ್ಲ ರೀತಿಯ ಸಹಾಯ ಮಾಡುವ ಭರವಸೆಯನ್ನೂ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ತರಾಖಂಡದ ಸುಮ್ನಾಕ್ಕಿಂತ 4 ಕಿ.ಮೀ ದೂರದಲ್ಲಿರುವ ಸುಮ್ನಾ-ರಿಮ್ಖಿಮ್ ರಸ್ತೆಯಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಹಿಮಪಾತವಾಗಿದ್ದು, ಈ ಪ್ರದೇಶದಲ್ಲಿ ಕಳೆದ ಐದು ದಿನಗಳಿಂದ ಭಾರಿ ಮಳೆ ಮತ್ತು ಹಿಮಪಾತವಾಗುತ್ತಿದೆ.
ಮಾಹಿತಿಯ ಪ್ರಕಾರ, ಹಿಮಪಾತವಾದ ತಕ್ಷಣವೇ ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಎರಡೂ ಶಿಬಿರಗಳಲ್ಲಿ ಇತರ ಕಾರ್ಮಿಕರನ್ನು ಪತ್ತೆ ಹಚ್ಚುವ ಕಾರ್ಯಾಚರಣೆ ಮುಂದುವರೆದಿದೆ, ಆದರೆ, ಈವರೆಗೆ ಎಂಟು ಶವಗಳನ್ನು ಹೊರಗೆ ತೆಗೆಯಲಾಗಿದೆ.
ಇದೀಗ ಎರಡೂವರೆ ತಿಂಗಳ ನಂತರ ಶುಕ್ರವಾರ ಸಂಜೆ ಮತ್ತೆ ಹಿಮಸ್ಫೋಟ ಸಂಭವಿಸಿರುವುದಾಗಿ ತಿಳಿದುಬಂದಿದೆ. ಆದರೆ ಹಿಮಸ್ಫೋಟಕ್ಕೆ ಕಾರಣವೇನು, ಸ್ಫೋಟದಿಂದಾಗಿ ಸಂಭವಿಸಿರುವ ಹಾನಿಯ ಕುರಿತು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.