ಉಚಿತ ಕೊರೊನಾ ಲಸಿಕೆ ಯಾಕೆ ಕೊಡೋಕೆ ಆಗಲ್ಲ..?
ಬೆಂಗಳೂರು : ಕೊರೊನಾ ಲಸಿಕೆಯನ್ನ ಎಲ್ಲರಿಗೂ ಉಚಿತವಾಗಿ ನೀಡಬೇಕು.. ನಾವು ಚುನಾವಣೆಯಲ್ಲಿ ಗೆದ್ದರೇ ಲಸಿಕೆಯನ್ನ ಉಚಿತವಾಗಿ ನೀಡುತ್ತೇವೆ. ನಾವು ಲಸಿಕೆ ಪಡೆದುಕೊಂಡಿದ್ದೇವೆ ನೀವೂ ಲಸಿಕೆಯನ್ನ ಹಾಕಿಸಿಕೊಳ್ಳಿ.. ಕೊರೊನಾ ವಿರುದ್ಧ ಹೋರಾಡಲು ಎಲ್ಲರು ಒಂದಾಗಿ.. ನಾವು ದೇಶದಲ್ಲಿ ಲಸಿಕಾ ಮಹಾಯಜ್ಞ ಮಾಡೋಣ ಎಂಬ ರಾಜಕೀಯ ನಾಯಕರ ಪುಂಕಾನುಪುಂಕ ಭಾಷಣೆಗಳ ಮಧ್ಯೆ ಜನರ ಸಾಮಾನ್ಯರಲ್ಲಿ ಮೂಡುತ್ತಿರುವ ಪ್ರಶ್ನೆ ” ಎಲ್ಲರಿಗೂ ಉಚಿತ ಕೊರೊನಾ ಲಸಿಕೆ ಯಾಕೆ ಕೊಡೋಕೆ ಆಗಲ್ಲ”..?
ಹೌದು..! ನಾವು ಕೊರೊನಾವನ್ನ ದೇಶದಿಂದ ಓಡಿಸಲು ಹಾಗೂ ಅದರ ವಿರುದ್ಧ ಹೋರಾಡಲು ಬರೋಬ್ಬರಿ ಮೂರು ತಿಂಗಳುಗಳ ಕಾಲ ಮನೆಯಲ್ಲಿ ಅಜ್ಞಾತ ವಾಸ ಅನುಭವಿಸಿದ್ದೇವೆ. ದೇಶವನ್ನ ಹೆಮ್ಮಾರಿ ದಾಳಿಯಿಂದ ತಪ್ಪಿಸಲು ಎಲ್ಲವನ್ನೂ ಬಿಟ್ಟು ಸರ್ಕಾರದ ಮಾತು ಕೇಳಿದ್ದೇವೆ. ಕೇವಲ ದೇಶಕ್ಕಾಗಿ ಅಧಿಕಾರದಲ್ಲಿರುವವರ ಮಾತಿಗೆ ಮರು ಮಾತನಾಡದೇ ದೀಪ ಹಚ್ಚಿದ್ದೇವೆ, ಜಾಗಟೆ ಬಾರಿಸಿದ್ದೇವೆ. ಚಪ್ಪಾಳೆ ತಟ್ಟಿದ್ದೇವೆ. ಮನೆಯಲ್ಲಿ ಅಲುಗಾಡದೇ ಕೂತಿದ್ದೇವೆ. ಆದ್ರೆ ಸರ್ಕಾರ ಮಾತ್ರ ಉಚಿತ ಲಸಿಕೆ ಯಾಕೆ ಕೊಡುತ್ತಿಲ್ಲ..?
ನಿಜ ಒಪ್ಪಿಕೊಳ್ಳೋಣ ದೇಶ ಈಗ ಆರ್ಥಿಕ ಸಂಕಷ್ಟದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರಿಗೂ ಉಚಿತ ಲಸಿಕೆ ನೀಡೋಕೆ ಆಗುವುದಿಲ್ಲ. ಆದ್ರೆ ರಾಜಕಾರಣಿಗಳೇನಾದ್ರೂ..? ಚುನಾವಣೆಯಲ್ಲಿ ಮತಕ್ಕೆ 500, 1000, 2000 ಸಾವಿರ ಅಂತ ಹಣದ ಹಂಚುವ ನಾಯಕರೇನಾದ್ರೂ..? ಮೂಲಗಳ ಪ್ರಕಾರ ಈಗ ಲಸಿಕೆಗೆ ಒಂದಿಷ್ಟು ಅಂತಾ ಮೊತ್ತವನ್ನ ಫಿಕ್ಸ್ ಮಾಡಲಾಗಿದೆ. ಇದರಿಂದ ಉಳ್ಳವರು ಯಾವುದೇ ಅಡೆತಡೆಗಳಿಲ್ಲದೇ ಲಸಿಕೆಯನ್ನ ಹಾಕಿಸಿಕೊಳ್ಳುತ್ತಾರೆ. ಆದ್ರೆ ಬಡವರ ಕಥೆಯೇನು..? ಈಗಾಗಲೇ ಕೊರೊನಾದಿಂದ ಬಡವರ ಬದುಕು ಬೀದಿಗೆ ಬಂದಿದೆ. ಒಂದೋತ್ತು ಊಟ ಇಲ್ಲದೇ ಅದೆಷ್ಟೋ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈಗ ಮತ್ತೆ ಕೊರೊನಾ ಎರಡನೇ ಅಲೆ ಬಡವರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ದೇಶದಲ್ಲಿ ಎಲ್ಲಿ ಮತ್ತೆ ಲಾಕ್ ಡೌನ್ ಮಾಡ್ತಾರೋ ಎಂಬ ಆತಂಕದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜಕಾರಣಿಗಳು ಜನರ ಕೈ ಹಿಡಿಯಬೇಕಲ್ಲವೇ…? ಚುನಾವಣೆಯಲ್ಲಿ ವೋಟಿಗೆ ಇಷ್ಟು ಹಣ ಅಂತ ಕೊಡುವ ಹಣವಂತ ರಾಜಕಾರಣಿಗಳು ಈಗ ಬಡವರಿಗಾಗಿ ಲಸಿಕೆಯ ಮೊತ್ತವನ್ನ ಬರಿಸುವುದಕ್ಕೆ ಆಗುವುದಿಲ್ಲವೇ..?
ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭಾ ಚುನಾವಣೆಯವರೆಗೂ ಹಣದ ಹೊಳೆಯನ್ನೇ ಹರಿಸುವ ನಾಯಕರೇ ಈಗ ಜನರಿಗೆ ಸಹಾಯ ಮಾಡಿ.. ಲಸಿಕೆಯ ಹಣವನ್ನ ನೀಡಿ ಜನ ನೀಡಿದ ಮತದ ಋಣವನ್ನ ಈಗಲಾದರೂ ತೀರಿಸಿಕೊಳ್ಳಿ. ಚುನಾವಣೆ ಸಂದರ್ಭದಲ್ಲಿ ನೀವು ಕೊಟ್ಟ ಹಣ ಯಾವುದಕ್ಕೆ ಸಹಾಯವಾಯಿತೋ, ಆಗುತ್ತೋ ಗೊತ್ತಿಲ್ಲ. ಆದ್ರೆ ಈಗ ನೀವು ಕೊಡುವ ಹಣ, ಮಾಡುವ ಸಹಾಯ ಜನರ ಜೀವ ಉಳಿಸುತ್ತದೆ.. ಯೋಜನೆ ಮಾಡಿ.
ವರದಿ : ಮಹೇಶ್ ಎಂ ದಂಡು