ಬೆಳಗಾವಿ: ಹುಕ್ಕೇರಿ ಪಟ್ಟಣದಲ್ಲಿ ನಡೆದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಉಮೇಶ್ ಕತ್ತಿ ಅಧಿಕಾರಿಯೊಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಭೆಯಲ್ಲಿ ಸಮರ್ಪಕ ವಿದ್ಯುತ್ ಕಲ್ಪಿಸದ ಹುಕ್ಕೇರಿ ವಿದ್ಯುತ್ ಸರಬರಾಜು ಸಂಘದ ಅಭಿಯಂತ ನೇಮಿನಾಥ್ ಖೇಮಲಾಪೂರೆ ಅವರನ್ನುಹಿಗ್ಗಾಮುಗ್ಗಾತರಾಟೆಗೆ ತೆಗೆದುಕೊಂಡ ಅವರು, ನಾನು ಕಳೆದ ಹಲವು ದಿನಗಳಿಂದ ನಿನ್ನನ್ನು ಗಮನಿಸುತ್ತಿದ್ದೇನೆ. ನೀನು ಜವಾಬ್ದಾರಿಯಿಂದ ಕೆಲಸ ಮಾಡುತ್ತಿಲ್ಲ. ಜನರ ಸಮಸ್ಯೆ ಸೇರಿದಂತೆ ಕುಡಿಯುವ ನೀರು, ವಿದ್ಯುತ್ ನೀಡುವಲ್ಲಿ ಬೇಜವಾಬ್ದಾರಿ ವರ್ತನೆ ಮಾಡುತ್ತಿರುವೆ. ಇದು ಹೀಗೆ ಮುಂದುವರಿದ್ರೆ, ನಿನ್ನ ಅಮಾನತು ಮಾಡಿಸುತ್ತೇನೆ. ಮತ್ತೆ ಲಾಕ್ ಡೌನ್ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದರೆ ಹೊಡೆಯುವುದಾಗಿ ಉಮೇಶ್ ಕತ್ತಿ ಎಚ್ಚರಿಕೆ ನೀಡಿದರು.
ಅಲ್ಲದೇ ಜನರಿಗೆ ನೀಡುತ್ತಿರುವ ಪಡಿತರ ವ್ಯವಸ್ಥೆಯಲ್ಲಿ, ಕುಡಿಯುವ ನೀರು ಸರಬರಾಜು, ಕೃಷಿ ಚಟುವಟಿಕೆಗಳು, ರೈತರು ಬೆಳೆದ ತರಕಾರಿಗೆ ಮಾರುಕಟ್ಟೆ ಕಲ್ಪಿಸಲು ಯಾವುದೇ ವ್ಯತ್ಯಯ ಆಗದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಉಮೇಶ್ ಕತ್ತಿ ಸೂಚನೆ ನೀಡಿದರು.








