ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಎಂ.ಚಂದ್ರಶೇಖರ್ ಕೊರೊನಾಗೆ ಬಲಿ
ಸ್ಯಾಂಡಲ್ ವುಡ್ ಖ್ಯಾತ ನಿರ್ಮಾಪಕರಾಗಿರುವ ಎಂ.ಚಂದ್ರಶೇಖರ್ ಅವರು ಹೆಮ್ಮಾರಿ ಕೊರೊನಾಗೆ ಬಲಿಯಾಗಿದ್ದಾರೆ. ಇದ್ರಿಂದಾಗಿ ಚಿತ್ರರಂಗ ಮತ್ತಷ್ಟು ಆಘಾತಕ್ಕೆ ಒಳಗಾಗಿದೆ. ಇತ್ತೀಚೆಗಷ್ಟೇ ಕನ್ನಡದ ಸಿನಿಮಾರಂಗದ ನಿರ್ಮಾಪಕ ಹಾಗೂ ನಟಿ ಮಾಲಾಶ್ರೀ ಪತಿ ರಾಮು ಅವರು ಸಹ ಕೋವಿಡ್ ನಿಂದಲೇ ನಿಧರಾಗಿದ್ದರು.
ನಿಮಿಶಾಂಬ ಪ್ರೊಡಕ್ಷನ್ ನ ಅಡಿ ಅಣ್ಣಯ್ಯ, ಬಿಂದಾಸ್, ಏನೋ ಒಂಥರಾ, ರನ್ನ ಸೇರಿದಂತೆ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಚಂದ್ರಶೇಖರ್ ಇದೀಗ ಕೊನೆಯುಸಿರೆಳೆದಿದ್ದಾರೆ. ಕಳೆದ 23 ದಿನಗಳ ಹಿಂದೆ ಚಂದ್ರಶೇಖರ್ ಅವರಿಗೆ ಕೋವಿಡ್ ಪಾಸಿಟಿವ್ ವರದಿ ಬಂದಿತ್ತು.
ನಂತರ ಮಣಿಪಾಲ್ ಸೆಂಟರ್ ಗೆ ದಾಖಲಾಗಿದ್ದರು. ಬಳಿಕ ಕೋವಿಡ್ ನಿಂದ ಗುಣಮುಖರಾಗಿದ್ದಾದರೂ ಶ್ವಾಸಕೋಶ ಸಮಸ್ಯೆ ಉಲ್ಬಣಗೊಂಡಿದ್ದ ಪರಿಣಾಮ ಕೊನೆಯುಸಿರೆಳೆದಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಇತ್ತೀಚಿಗಷ್ಟೆ ನಿರ್ದೇಶಕ ಮಂಜು ಮಾಂಡವ್ಯ ನಿರ್ದೇಶನದ ಉಪೇಂದ್ರ ನಟನೆಯ ಹೊಸ ಸಿನಿಮಾ ಅನೌನ್ಸ್ ಮಾಡಿದ್ದರು. ಆದರೆ ಸಿನಿಮಾ ಸೆಟ್ಟೇರುವ ಮೊದಲೆ ಇಹಲೋಕ ತ್ಯಜಿಸಿದ್ದಾರೆ.