ಬೇಕಾಬಿಟ್ಟಿ ಓಡಾಡುವವರಿಗೆ ಬಸ್ಕಿ ಶಿಕ್ಷೆ ಕೊಟ್ಟ ಪೊಲೀಸರು kalaburagi
ಕಲಬುರಗಿ : ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಜಾರಿ ಮಾಡಲಾಗಿದೆ.
ಆದರೂ ಕೆಲವರು ಅನಗತ್ಯವಾಗಿ ಸಂಚರಿಸುತ್ತಿದ್ದು, ಅವರಿಗೆ ದಂಡ ವಿಧಿಸಿ ವಾಹನಗಳನ್ನ ಸೀಜ್ ಮಾಡಲಾಗುತ್ತಿದೆ.
ಈ ಮಧ್ಯೆ ಕಲಬುರಗಿ ನಗರದಲ್ಲಿ ಅನಗತ್ಯವಾಗಿ ಸಂಚರಿಸುವವರಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಲಾಗುತ್ತಿದೆ.
ನಗರದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ಕೆಲವರು ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು. ಅವರನ್ನ ಹಿಡಿದ ಪೊಲೀಸರು ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.
ನಗರದ ಜಗತ್ ವೃತ್ತದಲ್ಲಿ ರೌಡಿನಿಗ್ರಹ ದಳ ಪಿಎಸ್‍ಐ ವಾಹೀದ್ ಕೊತ್ವಾಲ್ ಅವರು ಸುಖಾಸುಮ್ಮನೆ ಒಡಾಡುತ್ತಿದ್ದ ಬೈಕ್ ಸವಾರರಿಗೆ ಬಸ್ಕಿ ಹೊಡೆಯುವ ಶಿಕ್ಷೆ ನೀಡಿದ್ದಾರೆ.
ರಾಜ್ಯದಲ್ಲಿ ದಿನದ ಸೋಂಕಿತರ ಸಂಖ್ಯೆ 40 ಸಾವಿರದ ಗಡಿಯತ್ತ ಸಾಗಿದ್ದು, ಕಲಬುರಗಿಯಲ್ಲಿ ಸಹ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆ ನಗರದಲ್ಲಿ ಕಟ್ಟು ನಿಟ್ಟಿನ ನಿಯಮಗಳನ್ನ ಜಾರಿ ಮಾಡಲಾಗುತ್ತಿದೆ.