ಬೆಂಗಳೂರು: ಕೊರೊನಾ ವೈರಸ್ ಸೋಂಕಿನ ಹೊಡೆತಕ್ಕೆ ರಾಜ್ಯ ತತ್ತರಿಸಿ ಹೋಗಿದೆ. ರಾಜ್ಯದ ಜನತೆ ಕೊರೊನಾಸುರನ ಅಬ್ಬರಕ್ಕೆ ಆತಂಕಗೊಂಡಿದ್ದಾರೆ. ಈ ಪರಿಸ್ಥಿತಿಯಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾದ ಸಚಿವರೇ ಏರು ಧ್ವನಿಯಲ್ಲಿಯಲ್ಲಿ ಕಿತ್ತಾಡಿಕೊಂಡಿದ್ದಾರೆ.
ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೋಮಶೇಖರ್ ಹಾಗೂ ನಾರಾಯಣಗೌಡ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸಿದ್ದಾರೆ. ಲಾಕ್ ಡೌನ್ ವಿಚಾರದಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಸುಗಮ ಸಾಗಾಟ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಹೋಗೋ, ಬಾರೋ ಎಂದು ಏಕವಚದಲ್ಲಿ ಸಚಿವರು ಜಗಳವಾಡಿದ್ದಾರೆ.
ಇತ್ತ ನನ್ನ ಇಲಾಖೆಯಲ್ಲಿ ನೀನು ಹಸ್ತಕ್ಷೇಪ ಮಾಡಬೇಡವೆಂದು ನಾರಾಯಣಗೌಡ ವಾರ್ನಿಂಗ್ ಕೊಟ್ಟರೆ, ಅತ್ತ ನಾನು ಸಹಕಾರ ಸಚಿವ. ನನಗೆ ಕೃಷಿ ಉತ್ಪನ್ನಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದ ಸೋಮಶೇಖರ್ ತಿರುಗೇಟು ನೀಡಿದ್ದಾರೆ. ಈ ವೇಳೆ ಇಬ್ಬರು ಸಚಿವರ ನಡುವಿನ ಕಿತ್ತಾಟವನ್ನು ಇತರೆ ಸಚಿವರು ಮೌನ ಪ್ರೇಕ್ಷಕರಾಗಿ ನೋಡುತ್ತಿದ್ದರು. ಸಚಿವರ ನಡುವೆ ಕಿತ್ತಾಟ ಜೋರಾಗುತ್ತಿದ್ದಂತೆ ಸಭಾಂಗಣದ ಬಾಗಿಲನ್ನು ಸಿಬ್ಬಂದಿ ಮುಚ್ಚಿದರು.








