ಆಕ್ಸಿಜನ್ ಕೊರತೆಗೆ ಕಾರಣ ಯಾರು : ಪ್ರಧಾನಿಗಳೇ ನಮ್ಮ ಕರ್ನಾಟಕ ಅಂದ್ರೆ ಯಾಕಿಷ್ಟು ನಿರ್ಲಕ್ಷ್ಯ..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಲಂಗು ಲಗಾಮು ಇಲ್ಲದೇ ಹುಚ್ಚು ಕುದುರೆಯಂತೆ ಓಡುತ್ತಿರುವ ಕೊರೊನಾಗೆ ಕಡಿವಾಣ ಹಾಕಲು ಹರಸಾಹಸಪಡುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಎದ್ದು ಕಾಣುತ್ತಿದ್ದು, ಆಮ್ಲಜಕನವಿಲ್ಲದೇ ನೂರಾರು ಮಂದಿ ಕೊನೆಯುಸಿರೆಳೆಯುತ್ತಿದ್ದಾರೆ.
ಆಕ್ಸಿಜನ್ ಇದೆ ಎನ್ನುವ ಸರ್ಕಾರ ಈ ಸಮಸ್ಯೆಯನ್ನು ನೀಗಿಸಲು ನಾನಾ ಸರ್ಕಸ್ ನಡೆಸುತ್ತಿದೆ. ಈ ಮಧ್ಯೆ ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಉಂಟಾಗಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ಕಾರಣವೇ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೇಂದ್ರದ ಕೆಲ ನಿರ್ಧಾರಗಳಿಂದ ನಮ್ಮಲ್ಲಿ ಆಕ್ಸಿಜನ್ ಕೊರತೆ ಉಂಟಾಗುತ್ತಿದೆ ಎಂಬ ವಾದ ರಾಜ್ಯದಲ್ಲಿ ಹರಿಡಾಡುತ್ತಿದೆ.
ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಬಗ್ಗೆ ಮುಖ್ಯಮಂತ್ರಿಗಳು ಪ್ರಧಾನಿಗಳ ಬಳಿ ಮನವಿ ಮಾಡಿಕೊಂಡಾಗ ಕೂಡಲೇ ಆಕ್ಸಿಜನ್ ಪೂರೈಸೋದಾಗಿ ಅವರು ಭರವಸೆ ನೀಡಿದ್ದರು. ಆದ್ರೆ ಭರವಸೆ ನೀಡಿ ಎರಡು ವಾರ ಕಳೆದರೂ ನಮ್ಮ ರಾಜ್ಯಕ್ಕೆ ಆಕ್ಸಿಜನ್ ರೈಲು
ನಮ್ಮಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಹೊರ ರಾಜ್ಯಗಳಿಗೆ..!
ಕೇಂದ್ರದಿಂದ ಹೆಚ್ಚುವರಿಯಾಗಿ ಬರಬೇಕಿದ್ದ ಆಕ್ಸಿಜನ್ ಸದ್ಯಕ್ಕೆ ಬರುವ ಹಾಗೇ ಕಾಣುತ್ತಿಲ್ಲ. ಹೋಗಲಿ ನಮ್ಮಲ್ಲಿ ಉತ್ಪಾದನೆ ಆಗುತ್ತಿರುವ ಆಕ್ಸಿಜನ್ ಅನ್ನಾದ್ರೂ ಬಳಕೆ ಮಾಡಿಕೊಳ್ಳೋಣ ಅಂದ್ರೆ ಅದನ್ನು ಬೇರೆ ರಾಜ್ಯಗಳಿಗೆ ಕಳುಹಿಸಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಕೊರತೆ ಎದುರಾಗಿದೆ. ನಮ್ಮ ಬಳ್ಳಾರಿ, ಧಾರವಾಡ ಸೇರಿ ಬೇರೆಕಡೆ ನಿತ್ಯ 1,041 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತದೆ. ಇದರಲ್ಲಿ ಬಳ್ಳಾರಿ ಪಾಲು 815 ಟನ್. ಸದ್ಯ ನಮ್ಮ ರಾಜ್ಯಕ್ಕೆ ನಿತ್ಯ 1,700 ಟನ್ ಆಕ್ಸಿಜನ್ ಅಗತ್ಯವಿದೆ.
ಆದ್ರೆ ನಮ್ಮಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ನ್ನು ಆಂಧ್ರ, ತೆಲಂಗಾಣ, ಮಹಾರಾಷ್ಟ್ರಗಳಿಗೆ ಕಳುಹಿಸಲಾಗುತ್ತಿದೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ನಮಗೆ ಬಿಟ್ಟಿದ್ದರೆ ಈ ಸ್ಥಿತಿ ಬರುತ್ತಿರಲಿಲ್ಲ.
ಯಾಕಿಷ್ಟು ನಿರ್ಲಕ್ಷ್ಯ..?
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಇತಿಹಾಸದಲ್ಲೇ ಎಂದೂ ಇಲ್ಲದ ರೀತಿಯಲ್ಲಿ ಮೋದಿ ಕೈ ಬಲಪಡಿಸಲು ರಾಜ್ಯದ ಜನರು ಬರೋಬ್ಬರಿ 25 ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ರು. ಆದ್ರೆ ರಾಜ್ಯದ ಜನರ ನೋವಿಗೆ ಮೋದಿ ಸ್ಪಂದಿಸುತ್ತಿಲ್ವಾ ಅನ್ನೋ ಪ್ರಶ್ನೆ ಈ ಹುಟ್ಟಿದೆ. ಯಾಕೆಂದ್ರೆ ಬೇರೆ ಉತ್ತರ ರಾಜ್ಯಗಳಲ್ಲಿ ಆಕ್ಸಿಜನ್ ದುರಂತಗಳು ನಡೆದಾಗ ಖುದ್ದು ಮಾಹಿತಿ ಪಡೆದುಕೊಂಡು ಪರಿಹಾರ ಹುಡುಕುವ ಪ್ರಧಾನಿ, ನಮ್ಮಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾದರೂ ಯಾಕೆ ನಮ್ಮತ್ತ ತಿರುಗಿ ನೋಡುತ್ತಿಲ್ಲ ಅನ್ನೋ ಪ್ರಶ್ನೆ ಜನರಲ್ಲಿ ಮೂಡಿದೆ.
ಈ ಬಗ್ಗೆ ಕೇಂದ್ರ ಸರ್ಕಾರವನ್ನ ಪ್ರಶ್ನೆ ಮಾಡುವವರು ಯಾರು..? ಮೋದಿ ಸರ್ಕಾರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡುತ್ತಿದೆಯೇ? 25 ಸಂಸದರನ್ನು ಕೊಟ್ಟ ರಾಜ್ಯಕ್ಕೆ ಕಾಳಜಿ ತೋರುತ್ತಿಲ್ಲ ಯಾಕೆ? ಕರ್ನಾಟಕದ ಬಗ್ಗೆ ನಿರ್ಲಕ್ಷ್ಯವೋ, ಸಿಎಂ ಮೇಲೆ ಕೋಪವೋ ಗೊತ್ತಿಲ್ಲ. ಆದ್ರೆ ಆಕ್ಸಿಜನ್ ಇಲ್ಲದೇ ಜನರು ಮಾತ್ರ ಆಸ್ಪತ್ರೆಗಳಲ್ಲಿ ನರಳಾಡುತ್ತಾ ಪ್ರಾಣ ಕಳೆದುಕೊಳ್ಳುತ್ತಿರುವುದು ದುರಂತವೇ ಸರಿ.