ಬೆಂಗಳೂರು: ಸೌಂದರ್ಯ, ದಕ್ಷಿಣ ಭಾರತೀಯ ಚಿತ್ರರಂಗದ ಅದ್ಭುತ ಪ್ರತಿಭೆ. ಕನ್ನಡ ಸೇರಿದಂತೆ ದಕ್ಷಿಣ ಭಾರತೀಯ ಭಾಷೆಗಳ ಚಿತ್ರರಂಗದಲ್ಲಿ ಅಪಾರ ಖ್ಯಾತಿ ಗಳಿಸಿದ್ದ ನಟಿ ಸೌಂದರ್ಯ ನಮ್ಮನ್ನಗಲಿ ಇಂದಿಗೆ ಹದಿನಾರು ವರ್ಷಗಳು. ಆದರೂ ಅವರು ಅಭಿನಯಿಸಿರುವ ಸಿನಿಮಾಗಳ ಮೂಲಕ ಇನ್ನೂ ಅಭಿಮಾನಿಗಳ ಮನದಲ್ಲಿ ಚಿರಪರಿಚಿತರಾಗಿದ್ದಾರೆ. ಚಿತ್ರನಟಿ, ನಿರ್ಮಾಪಕಿಯಾಗಿ ಸಾಧನೆಯ ಶಿಖರವೇರಿದ್ದ ನಟಿ ತಮ್ಮ ಸರಳತೆಗೆ ಹೆಸರಾಗಿದ್ದರು. ಇಂತಹ ಮೇರು ನಟಿ ವಿಮಾನ ದುರಂತದಲ್ಲಿ ಅಕಾಲ ಸಾವಿಗೀಡಾದದ್ದು ಮಾತ್ರ ಸಿನಿಮಾ ಅಭಿಮಾನಿಗಳಿಗೆ ಮರೆಯಲಾಗದ ನೋವನ್ನುಂಟು ಮಾಡಿತ್ತು.
ಜುಲೈ 18, 1972ಲ್ಲಿ ಹುಟ್ಟಿದ ಸೌಂದರ್ಯ ವೈದ್ಯೆಯಾಗಬೇಕೆಂದಿದ್ದವರು ಆಕಸ್ಮಿಕವಾಗಿ ಚಲನಚಿತ್ರರಂಗ ಪ್ರವೇಶಿಸಿದ್ದರು. ಈಕೆಯ ಮೂಲ ಹೆಸರು ‘ಸೌಮ್ಯ’, ತಮ್ಮ ಹಲವು ಚಿತ್ರಗಳಲ್ಲಿ ಇದೇ ಹೆಸರನ್ನು ಬಳಸಿಕೊಂಡಿದ್ದಾರೆ. ತೂಗುವೆ ಕೃಷ್ಣನ, ಸಿಪಾಯಿ, ನಾನು ನನ್ನ ಹೆಂಡ್ತೀರು, ಶ್ರೀ ಮಂಜುನಾಥ, ಆರ್ಯಭಟ, ದೋಣಿಸಾಗಲಿ, ಆಪ್ತಮಿತ್ರ ಸೇರಿ ಹಲವಾರು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದ ಸೌಂದರ್ಯ ತೆಲುಗು, ತಮಿಳು, ಮಲಯಾಳಂಗಳಲ್ಲಿ ಸಹ ಬಹು ಬೇಡಿಕೆಯ ನಟಿಯಾಗಿದ್ದರು.
ನಟಿಯಾಗಿ ಅಪಾರ ಖ್ಯಾತಿ ಪಡೆದಿದ್ದ ಸೌಂದರ್ಯ, ಗಿರೀಶ್ ಕಾಸರವಳ್ಳಿಯವರ ‘ದ್ವೀಪ’ ಚಿತ್ರದ ಮೂಲಕ ನಿರ್ಮಾಪಕಿಯಾಗಿಗೂ ಗುರುತಿಸಿಕೊಂಡು. ಈ ಚಿತ್ರಕ್ಕೇ ಕೇಂದ್ರ ಸರ್ಕಾರದ ‘ಸ್ವರ್ಣಕಮಲ’ ಪ್ರಶಸ್ತಿ ಲಭಿಸಿತ್ತು. ಅದರ ಜೊತೆಗೆ ಕರ್ನಾಟಕ ರಾಜ್ಯ ಸರ್ಕಾರದ ಉತ್ತಮ ಚಿತ್ರ ಪ್ರಶಸ್ತಿ ಮತ್ತು ಉತ್ತಮ ನಟಿ ಪ್ರಶಸ್ತಿ ಕೂಡಾ ಸೌಂದರ್ಯ ಅವರಿಗೆ ಸಿಕ್ಕಿದೆ. ದೋಣಿ ಸಾಗಲಿ ಚಿತ್ರದಲ್ಲಿ ಸೌಂದರ್ಯ ಅವರ ಅದ್ಭುತ ನಟನೆಗೆ ರಾಜ್ಯ ಸರ್ಕಾರ ಶ್ರೇಷ್ಠ ನಟಿ ಪ್ರಶಸ್ತಿ ನೀಡಿತ್ತು. ಇನ್ನು ಸೌಂದರ್ಯ ಡಾ. ಎಸ್. ಎಲ್. ಭೈರಪ್ಪನವರ ಶ್ರೇಷ್ಠ ಕಾದಂಬರಿ ‘ಗೃಹಭಂಗ’ ವನ್ನು ಕಿರುತೆರೆಯಲ್ಲಿ ಧಾರಾವಾಹಿಯಾಗಿ ಮೂಡಿಸಿದ್ದರು.
ಎಂದೆಂದಿಗೂ ಮರೆಯಲಾಗದ್ದು ‘ನಾಗವಲ್ಲಿ’ ಪಾತ್ರ!
ಆಪ್ತಮಿತ್ರ ಚಿತ್ರದ ನಾಗವಲ್ಲಿ ಪಾತ್ರ ಯಾರು ತಾನೆ ಮರೆಯೋಕೆ ಸಾಧ್ಯ. ನಾಗವಲ್ಲಿಯಾಗಿ ಸೌಂದರ್ಯ ಅವರ ಅಭಿನಯಕ್ಕೆ ಸಿನಿ ರಸಿಕರು ಪಿಧಾ ಆಗಿಬಿಟ್ಟಿದ್ದರು. ಡಾ. ವಿಷ್ಣುವರ್ಧನ್ , ಸೌಂದರ್ಯ ಮತ್ತು ಅವಿನಾಶ್, ದ್ವಾರಕೀಶ್ ಮೊದಲಾದವರು ನಟಿಸಿದ್ದ ಈ ಚಿತ್ರದಲ್ಲಿ ಸೌಂದರ್ಯ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. 16 ವರ್ಷದ ಸಿನಿ ಬದುಕಿನಲ್ಲಿ 102 ಚಿತ್ರಗಳಲ್ಲಿ ನಟಿಸಿದ್ದರು.
ಸಾಮಾಜಿಕ ಕಾಳಜಿ ಹೊಂದಿದ್ದ ಸೌಂದರ್ಯ ಅವರು ತಾವು ಹುಟ್ಟಿದ ಬಂಗಾರಪೇಟೆ ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಶಾಲೆಯನ್ನು ಕಟ್ಟಿಸಿಕೊಟ್ಟಿದ್ದರು. ಇಂದಿಗೂ ಆ ಶಾಲಾ ಕಟ್ಟಡದ ಮೇಲೆ ನಟಿ ಸೌಂದರ್ಯ ಹೆಸರು ಶಾಶ್ವತವಾಗಿ ಉಳಿದಿದೆ.
ಇನ್ನು 2004ರ ಏಪ್ರಿಲ್ 17ರಂದು ಬೆಂಗಳೂರಿನ ಜಕ್ಕೂರು ವಿಮಾನ ನೆಲೆಯಿಂದ ಆಂಧ್ರ ಪ್ರದೇಶಕ್ಕೆ ಚುನಾವಣಾ ಪ್ರಚಾರ ಸಲುವಾಗಿ ಹೊರಟಾಗ ವಿಮಾನ ಪತನವಾಗಿ ಸೌಂದರ್ಯ ಅವರು ಸಜೀವ ದಹನವದರು. ಈ ದುರಂತದ ವೇಳೆ ನಟಿ ಸೌಂದರ್ಯ ಹಾಗೂ ಅವರ ಅಣ್ಣ ಅಮರನಾಥ್ ಸಾವನ್ನಪ್ಪಿದ್ದರು.








