BIGGBOSS 8 : ಲಾಕ್ ಡೌನ್ ನಿಂದ ಸ್ಪರ್ಧಿಗಳ ಕನಸು ಭಗ್ನ – ಕಣ್ಣೀರಿಟ್ಟ ಮನೆ ಸದಸ್ಯರು
ಬಿಗ್ ಬಾಸ್ ಸೀಸನ್ 8 ಇನ್ನೂ 3 ವಾರಗಳ ಕಾಲ ಬಾಕಿ ಇರುವಾಗಲೇ ಶೋ ರದ್ದು ಮಾಡಲಾಗಿದೆ. ಕರ್ನಾಟಕ ಸರ್ಕಾರ ಹೊರಡಿಸಿರುವ ಆದೇಶದಿಂದಾಗಿ ಇದೀಗ ಮನೆ ಮಂದಿಯ ಕನಸು ಭಗ್ನವಾಗಿದೆ.. ಇಷ್ಟು ದಿನಗಳ ಕಾಲ ಹೊರಗಡೆ ಪ್ರಪಂಚದಲ್ಲಿ ಏನಾಗ್ತಿದೆ ಎನ್ನುವ ಅರಿವೇ ಇ್ಲದಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ನ್ಯೂಸ್ ಮೂಲಕ ಲಾಕ್ ಡೌನ್ ವಿಚಾರ ತಿಳಿಸಿದ್ದು, ಮನೆ ಮಂದಿ ಶಾಕ್ ಆಗಿ ಭಾವುಕರಾಗಿದ್ದಾರೆ.
ಹೋಟೆಲಿನಲ್ಲಿ ಕ್ವಾರಂಟೈನ್ ಬಳಿಕ ಬಿಗ್ ಮನೆ ಪ್ರವೇಶಿಸಿದ್ದ ಸ್ಪರ್ಧಿಗಳಿಗೆ ಹೊರ ಜಗತ್ತಿನ ಸಂಪರ್ಕ ಕಡಿತವಾಗಿತ್ತು. ಮೊಬೈಲ್, ಸಾಮಾಜಿಕ ಜಾಲತಾಣದಿಂದ ಹೊರಗಡೆ ಇದ್ದ ಇವರಿಗೆ ಹೊರ ಪ್ರಪಂಚದಲ್ಲಿ ಏನು ನಡೆಯುತ್ತದೆ ಎನ್ನುವುದು ತಿಳಿದಿರುವುದಿಲ್ಲ.
ಈ ವೇಳೆ ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ ಕೊರೊನಾ ಸೋಂಕು ಸುದ್ದಿಯನ್ನು ಆರಂಭದಲ್ಲಿ ಪ್ರಸಾರ ಮಾಡಲಾಗುತ್ತದೆ. ಬಳಿಕ ಸಿಎಂ ಯಡಿಯೂರಪ್ಪನವರು ರಾಜ್ಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಿದ ತುಣುಕನ್ನು ತೋರಿಸಲಾಗುತ್ತದೆ. ಲಾಕ್‍ಡೌನ್ ಘೋಷಣೆಯ ಸುದ್ದಿಯನ್ನು ಕೇಳುತ್ತಿದ್ದಂತೆ ಸ್ಪರ್ಧಿಗಳು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಲಾಕ್‍ಡೌನ್ ಘೋಷಣೆಯಾಗಿದ್ದು ಚಿತ್ರೀಕರಣಕ್ಕೆ ಅನುಮತಿ ನೀಡದ ಕಾರಣ ಬಿಗ್ ಬಾಸ್ 8ನೇ ಅವೃತ್ತಿಯನ್ನು ವಾಹಿನಿ ನಿಲ್ಲಿಸಿದೆ. ಈ ಸಂಬಂಧ ಮೇ 8ರಂದು ವಾಹಿನಿಯ ಬಿಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಪೋಸ್ಟ್ ಮಾಡಿ ನಿಲ್ಲಿಸುವ ವಿಚಾರವನ್ನು ತಿಳಿಸಿದ್ದರು. ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ ಎಂದು ಹೇಳಿದ್ದರು.
ಒಟ್ಟಾರೆ ಇನ್ನೂ ಫಿನಾಲೆವರೆಗೂ ಎಲಿಮಿನೇಷನ್ ನಿಂದ ತಪ್ಪಿಸಿಕೊಳ್ಳುವುದು ಹೇಗೆ ಫೈನಲ್ಸ್ ಗೆ ಹೋಗೋದು ಹೇಗೆ ಎಂಬ ಲೆಕ್ಕಾಚಾರ ಹಾಕ್ತಿದ್ದ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ಮತ್ತೊಂದೆಡೆ ತಮ್ಮ ಫೇವರೇಟ್ ಆಟಗಾರರನ್ನ ಗೆಲ್ಲಿಸಬೇಕೆಂಬ ಆಸೆಯಲ್ಲಿದ್ದ ಪ್ರೇಕ್ಷಕರು ಬೇಸರಗೊಂಡಿದ್ದಾರೆ. ಇನ್ನೂ ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲನೇ ಬಾರಿಗೆ ಶೋ ಅರ್ಧಕ್ಕೆ ನಿಲ್ಲಿಸಲಾಗಿದೆ.








