ಜಕಾರ್ತಾ: ಕೊರೊನಾ ಸೋಂಕು ಹರಡದಂತೆ ತಡೆಯಲು ಇಂಡೋನೇಷ್ಯಾದಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಆದ್ರೆ ಇಲ್ಲಿನ ಜನರು ಮಾತ್ರ ಲಾಕ್ ಡೌನ್ ನಿಯಮಗಳನ್ನ ಉಲ್ಲಂಘನೆ ಮಾಡುತ್ತಲೇ ಇದ್ದಾರೆ. ಅದರಲ್ಲೂ ರಾತ್ರಿ ವೇಳೆಯಲ್ಲೂ ಜನರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಆದ್ರೆ ಇಲ್ಲಿನ ಒಂದು ಗ್ರಾಮದಲ್ಲಿ ಮಾತ್ರ ಜನರು ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಅದಕ್ಕೆ ಕಾರಣ ದೆವ್ವಗಳ ಕಾಟ.
ಹೌದು..! ಇಲ್ಲಿನ ಸೆಂಟ್ರಲ್ ಜಾವಾದ ಕೆಫು ಗ್ರಾಮದಲ್ಲಿ ಲಾಕ್ ಡೌನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಇದಕ್ಕೆ ಕಾರಣ ಗ್ರಾಮದಲ್ಲಿನ ದೆವ್ವಗಳು… ಹೀಗಾಗಿ ಈ ಗ್ರಾಮಸ್ಥರು ರಸ್ತೆಗಿಳಿಯಲು ಹೆದರುತ್ತಿದ್ದಾರೆ. ರಾತ್ರಿಯಾಗುತ್ತಿದ್ದಂತೆ ಗ್ರಾಮದಲ್ಲಿ ದೆವ್ವಗಳ ಓಡಾಟ ಶುರುವಾಗುತ್ತದೆ. ಮನೆಯಿಂದ ಹೊರಗೆ ಇಳಿದವರೂ ಬದುಕಿದೆಯಾ ಬಡಜೀವ ಅಂತ ಮತ್ತೆ ಮನೆಯೊಳಕ್ಕೆ ಸೇರಿಕೊಳ್ಳುತ್ತಾರೆ.
ಅಂದ್ಹಾಗೆ ಈ ಗ್ರಾಮದಲ್ಲಿ ರಾತ್ರಿ ವೇಳೆ ಓಡಾಡುತ್ತಿರುವುದು ನಿಜವಾದ ದೆವ್ವಗಳು ಅಲ್ಲವೇ ಅಲ್ಲ. ಬದಲಾಗಿ ಲಾಕ್ ಡೌನ್ ನಿಯಮ ಉಲ್ಲಂಘನೆ ತಪ್ಪಿಸೋದಕ್ಕೆ ಮತ್ತು ಜನರನ್ನು ಮನೆಯೊಳಗೇ ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಲು ಕೆಲವು ಸ್ವಯಂಸೇವಾ ಸಂಸ್ಥೆಗಳು ಕಂಡುಕೊಂಡ ಉಪಾಯವಿದು. ದೆವ್ವಗಳಂತೆ ಉಡುಪು ಧರಿಸಿ ಸ್ವಯಂ ಸೇವಕರು ರಾತ್ರಿ ಇಡೀ ನಿಗಾವಹಿಸುತ್ತಾರೆ. ಇವರು ಇಲ್ಲಿನ ಕೊರೊನಾ ವಾರಿಯರ್ಸ್. ಇಂಡೋನೇಷ್ಯಾದ ಗ್ರಾಮೀಣ ಭಾಗದಲ್ಲಿ ಸದ್ಯ ಈ ಪ್ರಯೋಗ ನಡೆಯುತ್ತಿದೆ.