ಬೆಂಗಳೂರಲ್ಲಿ ಇರೋದು ಕೇವಲ 40 ಸಾವಿರ ವ್ಯಾಕ್ಸಿನ್ ಡೋಸೇಜ್ ಮಾತ್ರ
ಬೆಂಗಳೂರು : ಒಂದು ಕಡೆ ಕೊರೊನಾ ಕಾಟ, ಬೆಡ್, ಆಕ್ಸಿಜನ್ ಸಮಸ್ಯೆಯಿಂದ ಜನರು ಕಂಗಾಲಾಗಿದ್ದಾರೆ.
ಇದೀಗ ರಾಜ್ಯದಲ್ಲಿ ಕೊರೊನಾ ವಾಕ್ಸಿನ್ ಗೂ ಕೂಡ ಪರದಾಡು ಪರಿಸ್ಥಿತಿ ನಿರ್ಮಾಣವಾಗಿದೆ. ಜನರು ಆಸ್ಪತ್ರೆಗಳು ಮುಂದೆ ಗಂಟೆಗಟ್ಟಲೇ ಕಾದರೂ ವಾಕ್ಸಿನ್ ದೊರಕುತ್ತಿಲ್ಲ.
ಈ ಮಧ್ಯೆ ಬೆಂಗಳೂರಿನಲ್ಲಿ ಕೇವಲ 40 ಸಾವಿರ ವ್ಯಾಕ್ಸಿನ್ ಡೋಸೇಜ್ ಮಾತ್ರ ಲಭ್ಯವಿದ್ದು, ಇಂದು ಮುಗಿಯಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾಹಿತಿ ನೀಡಿದ್ದು, ನಗರದಲ್ಲಿರುವ ವಾಕ್ಸಿನ್ ಡೋಸೇಜ್ ಇಂದಿದೆ ಮುಗಿಯಲಿದೆ.
ನಾಳೆಗೆ ರಾಜ್ಯ ಸರ್ಕಾರದಿಂದ ಪೂರೈಕೆಯಾದರೆ ವ್ಯಾಕ್ಸಿನೇಷನ್ ಮುಂದುವರಿಸಲಾಗುವುದು. ಅಪಾರ್ಟ್ ಮೆಂಟ್ ಸಂಘ ಸಂಸ್ಥೆಗಳು, ನಾಗರಿಕರ ಕ್ಷೇಮಾಭಿವೃದ್ಧಿ ಸಂಘಗಳು, ಕೆಲಸದ ಜಾಗಗಳಲ್ಲಿ ನಡೆಸುತ್ತಿದ್ದ ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮಗಳು ಲಸಿಕೆ ಪೂರೈಕೆಯಿಲ್ಲದೆ ಈಗಾಗಲೇ ಸ್ಥಗಿತಗೊಂಡಿವೆ.
ನಗರದಲ್ಲಿ ಎರಡನೇ ಡೋಸ್ ಪಡೆಯುವ, 45 ವರ್ಷ ಮೇಲ್ಪಟ್ಟವರಿಗೆ ಪ್ರಮುಖ ಆದ್ಯತೆ ಕೊಟ್ಟು ವ್ಯಾಕ್ಸಿನ್ ನೀಡಲಾಗುತ್ತದೆ. ಎರಡನೇ ಡೋಸ್ ಸರಿಯಾದ ಸಮಯಕ್ಕೆ ಸಿಗದಿದ್ದರೆ ಮೊದಲ ಡೋಸ್ ಪಡೆದ ಪ್ರಯೋಜನವೂ ಸಿಗುವುದಿಲ್ಲ. ಹೀಗಾಗಿ 2ನೇ ಡೋಸ್ ಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಬಳಿಕ 45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ಕೊಡಲಾಗುವುದು. ಅಂತಿಮವಾಗಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು.
ಆದರೆ 18 ವರ್ಷ ಮೇಲ್ಪಟ್ಟವರಿಗೆ ಇನ್ನು ಲಸಿಕೆ ಪೂರೈಕೆಯಾಗಿಲ್ಲ. ಲಸಿಕೆ ಬಂದ ಬಳಿಕ ಕೊಡಲಾಗುವುದು ಎಂದು ಆಯುಕ್ತರು ತಿಳಿಸಿದರು.










