ಬೆಂಗಳೂರು: ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದ ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ಹೋಗಿ ಕಾರ್ಯ ನಿರ್ವಹಿಸಲು ಅವಕಾಶ ನೀಡುವ ಬಗ್ಗೆ ಏಪ್ರಿಲ್ 20ರ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಐಟಿ ಕಂಪನಿಗಳಿಗೆ ವಿನಾಯಿತಿ ನೀಡುವ ಬಗ್ಗೆ ಏಪ್ರಿಲ್ 20ರ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಮುಂದುವರಿದು ಮಾತನಾಡಿದ ಅವರು, ಏಪ್ರಿಲ್ ಅಂತ್ಯದ ವೇಳೆಗೆ ರಾಜ್ಯದಲ್ಲಿ 10 ಕೊರೋನಾ ಪರೀಕ್ಷಾ ಪ್ರಯೋಗಾಲಯಗಳನ್ನು ಆರಂಭಿಸಲಾಗುವುದು. ರಾಜ್ಯದಲ್ಲಿ ಈವರೆಗೆ 17,168 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಪ್ರತಿ ನಿತ್ಯ 2 ಸಾವಿರ ಮಂದಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಟೆಸ್ಟಿಂಗ್ ನಲ್ಲಿ ನಾವು ದೇಶದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.
ಇದೇ ವೇಳೆ ಪ್ಲಾಸ್ಮಾ ಚಿಕಿತ್ಸೆ ಬಗ್ಗೆ ಮಾತನಾಡಿದ ಅವರು, ಕೊರೋನಾ ಸೋಂಕಿಗೆ ಪ್ಲಾಸ್ಮಾ ಚಿಕಿತ್ಸೆ ಪರಿಣಾಮಕಾರಿ ಎನ್ನುತ್ತಿದ್ದಾರೆ. ಹೀಗಾಗಿ ಪ್ಲಾಸ್ಮಾ ಚಿಕಿತ್ಸೆ ನೀಡಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ ಅನುಮತಿ ಕೋರಿದ್ದೇವೆ. ಆದರೆ ಇನ್ನು ಅನುಮತಿ ಸಿಕ್ಕಿಲ್ಲ ಎಂದರು.
ಇನ್ನು ಇಂದು ಬೆಳಗ್ಗೆಯಷ್ಟೇ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ಏಪ್ರಿಲ್ 20ರ ನಂತರ ಐಟಿ ಕಂಪನಿಗಳಿಗೆ ಲಾಕ್ ಡೌನ್ ವಿನಾಯಿತಿ ನೀಡಲಾಗುವುದು. ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ತೆರಳಿ ಕೆಲಸ ಮಾಡಲು ಅನುಮತಿ ನೀಡಲಾಗುವುದು ಮತ್ತು ಈ ಸಂಬಂಧ ಉದ್ಯೋಗಿಗಳಿಗೆ ಯಾವುದೇ ಪಾಸ್ ಅಗತ್ಯ ಇಲ್ಲ ಎಂದು ಹೇಳಿದ್ದರು.








