ಗಾಯ ಮಾಯವಾಗುವ ಮುನ್ನವೇ ಮತ್ತೊಂದು ಕಂಟಕ : ಆತಂಕದಲ್ಲಿ ಕೊಡಗು ಮಂದಿ
ಮಡಿಕೇರಿ : ಕೊಡಗು ಜಿಲ್ಲೆ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಪ್ರಕೃತಿ ಕೋಪಕ್ಕೆ ಗುರಿಯಾಗುತ್ತಿದೆ. ಅದರಿಂದ ಚೇತರಿಸಿಕೊಂಡು ಮತ್ತೆ ಹೊಸ ಜೀವನ ಆರಂಭಿಸೋಣ ಎಂದುಕೊಳ್ಳವಷ್ಟರಲ್ಲಿ ಮತ್ತೊಂದು ಹೊಸ ಕಂಟಕ ಅಪ್ಪಳಿಸುತ್ತಿದೆ.
ಕಳೆದ ವರ್ಷ ಭಾರಿ ಮಳೆಯಿಂದ ತತ್ತರಿಸಿದ್ದ ಕೊಡಗಿಗೆ ಇದೀಗ ತೌಕ್ತೆ ಚಂಡಮಾರುತ ರೂಪದಲ್ಲಿ ಮತ್ತೊಂದು ಸಂಕಷ್ಟ ಎದುರಾಗಿದೆ.
ತೌಕ್ತೆ ಚಂಡಮಾರುತ ಹಿನ್ನಲೆಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಹ ಗಾಳಿಯ ಅಬ್ಬರ ಜೋರಾಗಿದ್ದು, ತಡರಾತ್ರಿಯಿಂದ ನಿರಂತರ ಮಳೆಯಾಗುತ್ತಿದೆ.
ಮಡಿಕೇರಿ, ಗೋಣಿಕೊಪ್ಪಲು, ಸಿದ್ದಾಪುರ, ಪೊನ್ನಂಪೇಟೆ, ವಿರಾಜಪೇಟೆ, ನಾಪೋಕ್ಲು, ಭಾಗಮಂಡಲ ಹಾಗೂ ತಲಕಾವೇರಿ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ.
ಕಳೆದ ಕೆಲವು ದಿನಗಳಿಂದಲೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿತ್ತು. ಈಗ ಚಂಡಮಾರುತದ ಪರಿಣಾಮ ಮತ್ತೆ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಪ್ರಮುಖ ಕಾವೇರಿ ನದಿ ಹಾಗೂ ಹಳ್ಳ-ಕೊಳ್ಳಗಳಲ್ಲಿ ನೀರಿನಮಟ್ಟ ಸ್ವಲ್ಪ ಏರಿಕೆಯಾಗಿದೆ.
ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಗುಡ್ಡಗಾಡು ಪ್ರದೇಶದ ಜನರಲ್ಲಿ ಮತ್ತೆ ಅತಂಕ ಮನೆ ಮಾಡಿದೆ.










