ದೇಶದಲ್ಲಿ ಕೋವಿಡ್ ಸಂಕಷ್ಟಕ್ಕೆ ಕಾಂಗ್ರೆಸ್ ಕಾರಣ : ಕಟೀಲ್
ಕಲಬುರಗಿ : ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗಲು ಹಾಗೂ ಸೋಂಕಿನಿಂದ ಜನರು ಸಾವಿಗೀಡಾಗುತ್ತಿರುವುದಕ್ಕೂ ಕಾಂಗ್ರೆಸ್ ನೇರ ಕಾರಣ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪ ಮಾಡಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಸಂಕಷ್ಟಕ್ಕೆ ಕಾಂಗ್ರೆಸ್ ನೇರ ಕಾರಣವಾಗಿದೆ. ದೇಶದ ಲಸಿಕೆ ಬಗ್ಗೆ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡಿದರು.
ಈ ಲಸಿಕೆ ಪರಿಣಾಮಕಾರಿ ಇಲ್ಲ. ಇದರಿಂದ ಪುರುಷತ್ವ ಕಡಿಮೆ ಆಗುತ್ತದೆ. ಅದು ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದೆಲ್ಲ ಅಪಪ್ರಚಾರ ಮಾಡಿದರು.
ಇದರಿಂದ ಲಸಿಕೆ ಪಡೆಯಲು ಜನರು ಹಿಂಜರಿದರು. ಅದರ ಪರಿಣಾಮವೇ ಈಗ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಾಗಿದೆ ಎಂದು ಕಟೀಲ್ ಆರೋಪಿಸಿದರು.
ಇನ್ನು ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಇದು ಸರಿಯಲ್ಲ. ದೇಶ ವಿರೋಧಿ ಕೆಲಸದಲ್ಲಿ ಅವರು ತೊಡಗಿದ್ದಾರೆ ಎಂದ ಕಟೀಲ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಹೈಕಮಾಂಡ್ ಏನು ಮಾಡುತ್ತದೋ ಸಿದ್ದರಾಮಯ್ಯನವರೂ ಅದನ್ನೇ ಮಾಡುತ್ತಾರೆ. ಅಧಿಕಾರಕ್ಕಾಗಿ ಈ ರೀತಿಯ ವರ್ತನೆಯನ್ನು ಜನ ಸಹಿಸುವುದಿಲ್ಲ. ಇದೇ ರೀತಿ ಮಾಡಿದರೆ ಬಾದಾಮಿಯಿಂದಲೂ ಸಿದ್ದರಾಮಯ್ಯನವರನ್ನು ಓಡಿಸುತ್ತಾರೆ ಎಂದು ಲೇವಡಿ ಮಾಡಿದ್ದಾರೆ.









