ಬಳ್ಳಾರಿ : ಮಹಾಮಾರಿ ಕೊರೊನಾ ಕಮ್ಮಿಯಾಗಲು ಆರೋಗ್ಯ ಸಚಿವ ಬಿ.ಶ್ರೀರಾಮುಲು, ಸೂತ್ರವೊಂದನ್ನು ಜನರ ಮುಂದಿಟ್ಟಿದ್ದಾರೆ. ಬಳ್ಳಾರಿಯಲ್ಲಿ ಆಹಾರ ಕಿಟ್ ವಿತರಿಸಿ ಮಾತನಾಡಿದ ಅವರು, ‘ಕೊರೊನಾ ಸೋಂಕಿನಿಂದ ಗುಣಮುಖರಾಗಲು ಸುಲಭ ದಾರಿಯೊಂದಿದೆ. ಬಿಸಿನೀರಿಗೆ ಉಪ್ಪು, ಅರಸಿಣವನ್ನು ಹಾಕಿ, ಅದರಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳಿ” ಎಂದರು.
“ನಾನೇನೂ ವೈದ್ಯನಲ್ಲ. ಚೀನಾದಲ್ಲಿ ಈ ರೀತಿ ಮಾಡಿರುವ ಬಗ್ಗೆ ಲೇಖನವೊಂದನ್ನು ಓದಿದ್ದೆ. ಕೊರೊನಾದ ಈ ಸಮಯದಲ್ಲಿ ಎಲ್ಲರೂ, ಬಿಸಿನೀರು ಬಳಸಿಕೊಳ್ಳುವುದು ಸೂಕ್ತ” ಎಂದು ಶ್ರೀರಾಮುಲು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೂ ಮೊದಲು ಹಾವೇರಿಯಲ್ಲಿ ಜಿಲ್ಲಾಧಿಕಾರಿಗಳ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದ ಶ್ರೀರಾಮುಲು, ಅಧಿಕಾರಿಗಳಿಂದ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಯಾರು ಕೂಡಾ ಹಸಿವಿನಿಂದ ಬಳಲಬಾರದು. ಶ್ರೀಮಂತರು, ಬಡವರಿಗೆ, ನಿರ್ಗತಿಕರಿಗೆ ಮತ್ತು ಕೂಲಿಕಾರ್ಮಿಕರಿಗೆ ಸಹಾಯವಾಗುವಂತೆ ದಾನಮಾಡಿ” ಎಂದು ಕರೆನೀಡಿದರು.