ಆಶಾಕಾರ್ಯಕರ್ತೆಯರ ಮನವಿಗೆ ಸ್ಪಂದಿಸಿದ ಬಿಸಿಪಿ
ಹಾವೇರಿ,ಮೇ.25: ಆಶಾಕಾರ್ಯಕರ್ತೆಯರ ಮನವಿಗೆ ಹಿರೇಕೆರೂರು ಮತಕ್ಷೇತ್ರದ ಶಾಸಕರೂ ಆಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಸ್ಪಂದಿಸಿ,ಕ್ಷೇತ್ರದ ಆಶಾ ಕಾರ್ಯಕರ್ತೆಯರಿಗೆ ಸಾವಿರ ಮಾಸ್ಕ್ ವಿತರಿಸಿದ್ದಾರೆ.
ಆರೋಗ್ಯ ಇಲಾಖೆಯಿಂದಲೇ ಆಶಾಕಾರ್ಯಕರ್ತೆಯರಿಗೆ ಮಾಸ್ಕ್ ,ಗ್ಲೌಸ್,ಸ್ಯಾನಿಟೈಜರ್ ವಿತರಣೆಯಾಗದ ಬಗ್ಗೆ ಇಂದು ಬೆಳಿಗ್ಗೆ ಆಶಾಕಾರ್ಯಕರ್ತೆಯರು ಬಿಸಿಪಿಗೆ ಮನವಿ ಮಾಡಿದ್ದರು.ಆಶಾಕಾರ್ಯಕರ್ತರನ್ನು ನಿರ್ಲಕ್ಷಸಿದ್ದಕ್ಕೆ ಜಿಲ್ಲಾ ಹಾಗೂ ತಾಲೂಕಿನ ಆರೋಗ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಬಿ.ಸಿ.ಪಾಟೀಲ್,ಆಶಾಕಾರ್ಯಕರ್ತರು ಮನವಿ ಮಾಡುತ್ತಿದ್ದಂತೆಯೇ ಸ್ಥಳದಲ್ಲಿಯೇ ಸಾವಿರಾರು ಮಾಸ್ಕ್ಗಳನ್ನು ಆಶಾಕಾರ್ಯಕರ್ತರಯರಿಗೆ ನೀಡಿ,ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ ಈ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದ್ದು, ಕೃಷಿ ಸಚಿವರ ಸ್ಪಂದನೆಗೆ ಆಶಾಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿ ಧನ್ಯವಾದ ಸಲ್ಲಿಸಿದ್ದಾರೆ.
ಸಂಜೆ ಕ್ಷೇತ್ರನಿರ್ವಹಣಾಧಿಕಾರಿಗಳ ಜೊತೆ ಸಭೆ ನಡೆಸಿದ ಬಿಸಿಪಿ,ಯಾವುದೇ ಕಾರಣಕ್ಕೂ ಇಂತಹ ನಿರ್ಲಕ್ಷ್ಯ ಸಲ್ಲದು.ಹಿರೆಕೆರೂರು ಮತಕ್ಷೇತ್ರದಲ್ಲಿ ಕೋವಿಡ್ ಹಾಗೂ ಫಂಗಸ್ ಸೋಂಕನ್ನು ನಿಯಂತ್ರಿಸಲು ಎಲ್ಲರೂ ಕಟಿಬದ್ಧರಾಗಿ ದುಡಿಯಬೇಕು.ಸ್ವಜಾಗೃತಿ ಕಾಳಜಿಯ ಜೊತೆಗೆ ಕ್ಷೇತ್ರದ ಜನತೆಯ ಆರೋಗ್ಯದತ್ತವೂ ಗಮನಹರಿಸಬೇಕು.ಕೋವಿಡ್ ಸೋಂಕು ತಡೆಗಟ್ಟಲು ಜನರಲ್ಲಿ ಸಾಮಾಜಿಕ ಅಂತರ ಮಾಸ್ಕ್ ಧಾರಣೆ,ಸ್ವಚ್ಛತೆ ಕಡೆಗೆ ಹೆಚ್ಚು ಗಮನಹರಿಸುವಂತೆಯೂ ಕೋವಿಡ್ ಸೋಂಕಿತರು ಕೋವಿಡ್ ಕೇರ್ ಸೆಂಟರ್ಗಳಿಗೆ ದಾಖಲಾಗುವಂತೆ ನೋಡಿಕೊಳ್ಳಬೇಕು.ಅದರೊಂದಿಗೆ ಸೋಂಕಿತರಿಗೆ ಸರ್ಕಾರದಿಂದ ಉಚಿತ ಚಿಕಿತ್ಸೆ ಹಾಗೂ ಅಧಿಕಾರಿಗಳು ಸಕಾರಾತ್ಮಕವಾಗಿ ಪ್ರತಿಕ್ರಯಿಸುವಂತೆ ಬಿಸಿಪಿ ಸಭೆಯಲ್ಲಿ ಸೂಚಿಸಿದರು.