ನಿಖಿಲ್ ವಿವಾಹದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಿದೆ. ಆದರೆ ಕೆಲವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪುತ್ರ ನಿಖಿಲ್ ಮದುವೆ ಸಮಾರಂಭದಲ್ಲಿ ನಿಯಮ ಪಾಲಿಸಿದರೂ ಇದ್ಯಾವುದೂ ಪಾಲನೆ ಆಗಿಲ್ಲ ಎಂಬ ಚರ್ಚೆಗಳು ನಡೆದವು. ರಾಜಕೀಯ ದ್ವೇಷಕ್ಕಾಗಿ ಶುಭ ಸಮಾರಂಭದ ವಿಷಯದಲ್ಲೂ ವಿಷ ಕಾರುವ ಮನಸ್ಥಿತಿಗಳು ರಾರಾಜಿಸಿದವು.
ಆದರೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇವೆಲ್ಲವನ್ನೂ ನಿರಾಕರಿಸುವ ಮೂಲಕ ಸತ್ಯದ ಪರ ನಿಂತಿದ್ದಾರೆ. ರಾಜ್ಯ ರಾಜಕಾರಣದ ದೊಡ್ಡ ಕುಟುಂಬ ಸರಳವಾಗಿ ವಿವಾಹ ಸಮಾರಂಭ ಮಾಡಿದೆ ಎಂದೂ ಯಡಿಯೂರಪ್ಪ ಅವರು ಸಹೃದಯದ ಮಾತುಗಳನ್ನಾಡಿದ್ದಾರೆ. ಅವರಿಗೆ ಮನದಾಳದ ಧನ್ಯವಾದಗಳು. ನನ್ನ ಒಡನಾಡಿಗಳು, ನನ್ನ ಹಿತೈಷಿಗಳು, ನನ್ನ ಜನ, ನನ್ನ ಕಾರ್ಯಕರ್ತರು ಇವರೆಲ್ಲರೊಂದಿಗೆ ಶುಭ ಸಮಾರಂಭವೊಂದರಲ್ಲಿ ಒಟ್ಟಿಗೆ ಸೇರಲು ವೈಯಕ್ತಿಕವಾಗಿ ನನಗೆ ಇದ್ದ ಒಂದೇ ಒಂದು ಸುವರ್ಣ ಅವಕಾಶವನ್ನು ಕೈಚೆಲ್ಲಿ ನಿಖಿಲ್ ವಿವಾಹವನ್ನು ಲಾಕ್‌ಡೌನ್ ನಿಯಮಗಳನ್ನು ಪಾಲಿಸಿ ಸರಳವಾಗಿ ಮಾಡಲಾಗಿದೆ.ನಿಖಿಲ್ ವಿವಾಹದಲ್ಲೂ ರಾಜಕೀಯ ಹುಡುಕಿದ ‘ಸಾಮಾಜಿಕ ಮಾಧ್ಯಮ’ದ ಕೆಲವು ಹುಳುಕು ಮನಸ್ಸಿನ ಮಂದಿ ತಮ್ಮ ಮನದಲ್ಲಿರುವ ವಿಷ ಕಾರಿಕೊಂಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.







