ಡಿಸಿ-ಸಂಸದರ ಕಿತ್ತಾಟ : ಮೈಸೂರಿನ ಮಾರ್ಯಾದೆ ಹೋಗ್ತಿದೆ ಎಂದ ಧ್ರುವನಾರಾಯಣ್
ಮೈಸೂರು : ನನ್ನ ರಾಜಕೀಯ ಜೀವನದಲ್ಲಿ ಈ ರೀತಿಯ ಕಿತ್ತಾಟ ನೋಡಿಲ್ಲ. ಅಧಿಕಾರಗಳು ಜನಪ್ರತಿನಿಧಿಗಳ ಜಗಳದಿಂದ ಮೈಸೂರಿನ ಮರ್ಯಾದೆ ಹೋಗ್ತಿದೆ ಎಂದು ಮಾಜಿ ಸಂಸದ ಧ್ರುವನಾರಾಯಣ್ ಹೇಳಿದ್ದಾರೆ.
ಸಂಸದ ಪ್ರತಾಪ್ ಸಿಂಹ ಮತ್ತು ಡಿಸಿ ರೋಹಿಣಿ ಸಿಂಧೂರಿ ಕಿತ್ತಾಟದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮೈಸೂರು ವಿಶ್ವದಲ್ಲೇ ಹೆಸರುವಾಸಿಯಾದ ನಗರ. ಜಿಲ್ಲೆಯಲ್ಲಿ ಹಲವು ನಾಯಕರು, ಅಧಿಕಾರಿಗಳು ಅವರದ್ದೇ ಆದ ಕೊಡುಗೆ ನೀಡಿ ಹೋಗಿದ್ದಾರೆ.
ಜಿಲ್ಲೆಯ ಅಭಿವೃದ್ಧಿಯಲ್ಲಿ ಹಿಂದಿನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಶ್ರಮ ಇದೆ. ಇಂತಹ ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಜನನಾಯಕರ ಆರೋಪ ಪ್ರತ್ಯಾರೋಪ ಸರಿಯಲ್ಲ ಎಂದು ಬೇಸರ ಹೊರಹಾಕಿದರು.
ಇನ್ನು ಬೆಂಗಳೂರು ಹೊರತುಪಡಿಸಿದ್ರೆ ಮೈಸೂರಿನಲ್ಲಿ ಅತಿಹೆಚ್ಚು ಪಾಸಿಟಿವ್ ಕೇಸ್ ದಾಖಲಾಗ್ತಿದೆ. ಇಂತಹ ಸಂದರ್ಭದಲ್ಲಿ ಇಬ್ಬರೂ ಒಗ್ಗಟ್ಟಿನಲ್ಲಿ ಕೆಲಸ ಮಾಡಬೇಕು. ಅದನ್ನ ಬಿಟ್ಟು ಹೀಗೆ ಬಹಿರಂಗವಾಗಿ ಕಿತ್ತಾಡೊದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪ್ರತಿದಿನ ಸಂಸದರು, ಶಾಸಕರ ಹೇಳಿಕೆ ಹಾಗೂ ಜಿಲ್ಲಾಧಿಕಾರಿಗಳ ಉತ್ತರ ಇದೇ ಆಗ್ತಿದೆ. ಆಡಳಿತ ಪಕ್ಷದ ನಾಯಕರು ಅಧಿಕಾರಿಗಳ ಶೀತಲ ಸಮರದ ಸತ್ಯ ಹೊರಬರಬೇಕು. ಇಬ್ಬರೂ ಈ ರೀತಿ ಕಿತ್ತಾಡ್ತಿರೋದು ನೋಡಿದ್ರೆ ಭ್ರಷ್ಟಾಚಾರದ ವಾಸನೆ ಬರ್ತಿದೆ.
ಜಿಲ್ಲಾಡಳಿತ ಕೋವಿಡ್ ನಿಯಂತ್ರಣದ ಖರ್ಚು ವೆಚ್ಚ ಹಾಗೂ ಟೆಂಡರ್ ದಾರರ ಬಹಿರಂಗ ಪಡಿಸಿ. ಸ್ಟೆಪ್ ಡೌನ್ ಆಸ್ಪತ್ರೆ ರದ್ದು ಮಾಡಿದ್ದ ಬಗ್ಗೆ ವರದಿ ನೀಡಿ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಧ್ರುವನಾರಾಯಣ್ ಒತ್ತಾಯಿಸಿದರು.