ಫ್ರೆಂಚ್ ಓಪನ್ 2021- ಮೂರನೇ ಸುತ್ತು ಪ್ರವೇಶಿಸಿದ ಗ್ರ್ಯಾಂಡ್ ಸ್ಲ್ಯಾಂ ರಾಣಿ ಸೆರೆನಾ
ಮಾಜಿ ನಂಬರ್ ವನ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ಅವರು 2021ರ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ.
ಮಹಿಳೆಯರ ಸಿಂಗಲ್ಸ್ ನ ಎರಡನೇ ಸುತ್ತಿನ ಪಂದ್ಯದಲ್ಲಿ ಸೆರೆನಾ ವಿಲಿಯಮ್ಸ್ 6-3, 5-7, 6-1ರಿಂದ ರೊಮಾನಿಯಾದ ಮಿಹಾಲಾ ಬುಝಾರೆನಸ್ಕೋ ಅವರನ್ನು ಪರಾಭವಗೊಳಿಸಿದ್ರು.
ಈಗಾಗಲೇ 23 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯ ಒಡತಿಯಾಗಿರುವ ಸೆರೆನಾ ವಿಲಿಯಮ್ಸ್ ಅವರು ದಾಖಲೆಯ 24ನೇ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲುವ ಕನಸಿನಲ್ಲಿದ್ದಾರೆ.
ಆದ್ರೆ ಕಳೆದ ಮೂರು ನಾಲ್ಕು ವರ್ಷಗಳಿಂದ ಸೆರೆನಾ ವಿಲಿಯಮ್ಸ್ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲಲು ಪರದಾಡುತ್ತಿದ್ದಾರೆ. 2017ರ ನಂತರ ಸೆರೆನಾ ಕಿರೀಟಕ್ಕೆ ಒಂದೇ ಒಂದು ಗ್ರ್ಯಾಂಡ್ ಸ್ಲ್ಯಾಂ ಸೇರಿಕೊಂಡಿಲ್ಲ. ಸದ್ಯ ಮಾರ್ಗರೇಟ್ ಕೋರ್ಟ್ ಅವರ ಹೆಸರಿನಲ್ಲಿ ದಾಖಲೆಯ 24 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳಿವೆ. ಅದನ್ನು ಸಮಗೊಳಿಸಲು 39ರ ಹರೆಯದ ಸೆರೆನಾಗೆ ಮತ್ತೊಂದು ಅವಕಾಶ ಸಿಕ್ಕಿದೆ.
ಇನ್ನು 2016ರಲ್ಲಿ ಸೆರೆನಾ ವಿಲಿಯಮ್ಸ್ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ್ದರು. ಆದಾದ ನಂತರ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದು ಶ್ರೇಷ್ಠ ಸಾಧನೆಯಾಗಿದೆ, 2003, 2013 ಮತ್ತು 2015ರಲ್ಲಿ ಸೆರೆನಾ ವಿಲಿಯಮ್ಸ್ ಅವರು ಒಟ್ಟು ಮೂರು ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ಅಷ್ಟೇ ಅಲ್ಲ, 2017ರ ಆಸ್ಟ್ರೇಲಿಯನ್ ಓಪನ್ ಗೆದ್ದ ನಂತರ ಸೆರೆನಾ ವಿಲಿಯಮ್ಸ್ ಅವರಿಗೆ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗೆಲ್ಲಲು ಸಾಧ್ಯವಾಗಿಲ್ಲ.
ಮಹಿಳೆಯ ಮತ್ತೊಂದು ಸಿಂಗಲ್ಸ್ ನಲ್ಲಿ ಅಝರೆಂಕಾ ಅವರು ಸುಲಭವಾಗಿ ಮೂರನೇ ಹಂತಕ್ಕೆ ತಲುಪಿದ್ದಾರೆ.
ಇನ್ನು ಪುರುಷರ ಸಿಂಗಲ್ಸ್ ನಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ ಡೇನಿಯಲ್ ಮೆಡ್ವೆಡೇವ್ ಅವರು 3-6, 6-1. 6-4, 6-3ರಿಂದ ಅಮೇರಿಕಾದ ಟೊಮಿ ಪೌಲ್ ಅವರನ್ನು ಸೋಲಿಸಿ ಮೂರನೇ ಸುತ್ತು ಪ್ರವೇಶಿಸಿದ್ರು.
ಹಾಗೇ ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಗ್ರೀಕ್ ನ ಸ್ಟೇಫನಾಸ್ ಅವರು 6-3, 6-4, 6-3ರಿಂದ ಸ್ಪೇನ್ ನ ಪೆಡ್ರೋ ಮಾರ್ಟಿನೇಜ್ ಆವರನ್ನು ಮಣಿಸಿದ್ರು.