ಫೆಂಗ್ಯುನ್ -4 ಬಿ ಉಪಗ್ರಹ ಉಡಾವಣೆ ಮಾಡಿದ ಚೀನಾ..!
ಚೀನಾ : ಚೀನಾವು ಹೊಸ ತಲೆಮಾರಿನ ಹವಾಮಾನ ಉಪಗ್ರಹವನ್ನು ಗುರುವಾರ ಯಶಸ್ವಿಯಾಗಿ ಯೋಜಿತ ಕಕ್ಷೆಗೆ ಉಡಾವಣೆ ಮಾಡಿದೆ. ಸಿಚುವಾನ್ ಪ್ರಾಂತ್ಯದ ಕ್ಸಿಚಾಂಗ್ ಉಪಗ್ರಹ ಉಡಾವಣಾ ಕೇಂದ್ರದಿಂದ ಮುಂಜಾನೆ ಲಾಂಗ್ ಮಾರ್ಚ್ -3 ಬಿ ರಾಕೆಟ್ ಮೂಲಕ ಫೆಂಗ್ಯುನ್ -4 ಬಿ (ಎಫ್ವೈ -4 ಬಿ) ಉಪಗ್ರಹವನ್ನು ಉಡಾಯಿಸಲಾಗಿದೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಉಪಗ್ರಹವನ್ನು ಹವಾಮಾನ ವಿಶ್ಲೇಷಣೆ, ಪರಿಸರ ಮತ್ತು ವಿಪತ್ತು ಮೇಲ್ವಿಚಾರಣೆ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ.
ಚೀನಾದ ಹೊಸ ತಲೆಮಾರಿನ ಹವಾಮಾನ ಉಪಗ್ರಹಗಳಲ್ಲಿ ಮೊದಲನೆಯದಾದ ಎಫ್ವೈ -4 ಬಿ ಉಪಗ್ರಹವನ್ನು ಹವಾಮಾನ ವಿಶ್ಲೇಷಣೆ ಮತ್ತು ಮುನ್ಸೂಚನೆ ಮತ್ತು ಪರಿಸರ ಮತ್ತು ವಿಪತ್ತು ಮೇಲ್ವಿಚಾರಣೆಯ ಕ್ಷೇತ್ರಗಳಲ್ಲಿ ಬಳಸಲಾಗುವುದು ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇನ್ನೂ ಈ ಹೊಸ ಉಪಗ್ರಹವು ಸಣ್ಣ ಮತ್ತು ಮಧ್ಯಮ ಪ್ರಮಾಣದಲ್ಲಿ ಸಂಭವಿಸಬಹುದಾದ ವಿಪತ್ತುಗಳ ಕುರಿತು ಮಾಹಿತಿಯನ್ನು ನೀಡುತ್ತದೆ. ಈ ಕ್ಷೇತ್ರದಲ್ಲಿ ಚೀನಾದ ಈಗಿರುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ. ಜತೆಗೆ, ಹವಾಮಾನ, ಕೃಷಿ, ವಾಯುಯಾನ, ಸಾಗರ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಹಲವು ಕ್ಷತ್ರಗಳಿಗೆ ಮಾಹಿತಿ ಮತ್ತು ಭದ್ರತಾ ಸೇವೆಯನ್ನು ಒದಗಿಸಲು ನೆರವಾಗುತ್ತದೆ ಎಂದು ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (ಸಿಎನ್ಎಸ್ಎ) ತಿಳಿಸಿದೆ.








