ಬೆಂಗಳೂರು: ನಿನ್ನೆ ನಗರದ ಪಾದರಾಯನಪುರದಲ್ಲಿ ನಡೆದ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಘಟನೆ ಸಂಬಂಧ ಮುಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಮಾತನಾಡಿದ ಅವರು, ಇದು ಸಣ್ಣ ಘಟನೆಯಲ್ಲ, ಗಂಭೀರ ಘಟನೆ. ದುಷ್ಕರ್ಮಿಗಳ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳುತ್ತೇವೆ. ಬಂಧಿತರ ವಿರುದ್ಧ ಈಗಾಗಲೇ ಐದು ಪ್ರಕರಣಗಳು ದಾಖಲಾಗಿವೆ. ಗಲಭೆ ಕುರಿತಂತೆ ತನಿಖೆ ನಡೆಯುತ್ತಿದೆ. ಇದರ ಹಿಂದಿರುವ ಕಾಣದ ಕೈಗಳಿಗಾಗಿ ಹುಡುಕಾಟ ನಡೆಸ್ತಿದ್ದೇವೆ. ಘಟನೆ ಹಿಂದೆ ಯಾರೇ ಇದ್ದರೂ, ಅವರೆಷ್ಟೇ ದೊಡ್ಡವರಿದ್ರೂ ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದರು.
ಇನ್ನು ಬಾಪೂಜಿನಗರ, ಪಾದರಾಯನಪುರ, ಟಿಪ್ಪು ನಗರಗಳಲ್ಲಿ ವಿಶೇಷ ಬಂದೋಬಸ್ತ್ ಮಾಡಲಾಗಿದೆ. ಹೆಚ್ಚುವರಿ ಪೊಲೀಸ್ ಫೋರ್ಸ್ ತಂದು ಬಿಗಿ ಭದ್ರತೆ ಕೈಗೊಳ್ತೇವೆ. ಜೊತೆಗೆ ಕ್ವಾರಂಟೈನ್ ಮಾಡಲು ಸಹ ಕ್ರಮ ಕೈಗೊಳ್ಳಲಾಗಿದೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು.