ಕೊರೊನಾ ಹಾಟ್ ಸ್ಪಾಟ್ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಇಳಿಮುಖವಾಗಿದ್ದು, ಜಿಲ್ಲಾಡಳಿತ ಕೊರೊನಾ ತಡೆಗಟ್ಟಲು ಕೈಗೊಂಡಿರುವ ಕ್ರಮಗಳಿಗೆ ಕೇಂದ್ರ ಅಭಿನಂದನೆ ತಿಳಿಸಿದೆ.
ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಕೊರೊನಾ ಸೋಂಕು ಮುಕ್ತವಾಗುವತ್ತ ಹೆಜ್ಜೆಯಿಡುತ್ತಿದೆ. ರವಿವಾರ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದ್ದು, 13 ಮಂದಿ ಗುಣಮುಖರಾಗಿದ್ದಾರೆ. ಅದರಲ್ಲಿ 8 ಮಂದಿ ಕಾಸರಗೋಡು ಜಿಲ್ಲೆಯವರು.
ಕಾಸರಗೋಡು ಜಿಲ್ಲೆಯಲ್ಲಿ ಇಲ್ಲಿಯವರೆಗೆ 169 ಮಂದಿಗೆ ಸೋಂಕು ದೃಢಪಟ್ಟಿದ್ದು, 123 ಮಂದಿ ಗುಣಮುಖರಾಗಿದ್ದಾರೆ. ಕೇಂದ್ರ ಸರಕಾರ ಕೊರೊನಾ ತಡೆಗಟ್ಟುವ ಪ್ರಕ್ರಿಯೆಯಲ್ಲಿ ಇಡೀ ದೇಶಕ್ಕೆ ಮಾದರಿ ಎಂದು ಕಾಸರಗೋಡು ಜಿಲ್ಲೆಯನ್ನು ಶ್ಲಾಘಿಸಿದೆ. ಕೊರೋನಾ ನಿಯಂತ್ರಣಕ್ಕೆ ಕಾಸರಗೋಡು ಜಿಲ್ಲೆ ತೆಗೆದುಕೊಂಡಿರುವ ಕ್ರಮಗಳು ಅಭಿನಂದನಾರ್ಹ ಎಂದು ಕೇಂದ್ರ ಹೇಳಿದೆ.
ಕಾಸರಗೋಡು ಜಿಲ್ಲೆ ಹೆಚ್ಚಿನ ಸಂಖ್ಯೆಯ ಕೊರೊನಾ ಸೋಂಕು ಪ್ರಕರಣಗಳಿಂದ ಕೊರೊನಾ ಹಾಟ್ ಸ್ಪಾಟ್ ಎಂದು ಕರೆಯಿಸಿಕೊಂಡಿತ್ತು. ಆದರೆ ಜಿಲ್ಲೆಯಲ್ಲಿ ಶೇ. 54ರಷ್ಟು ಮಂದಿ ಗುಣಮುಖರಾಗಿ, ಪ್ರಕರಣಗಳ ಸಂಖ್ಯೆಯೂ ಇಳಿಮುಖವಾಗಿದ್ದು ಸೋಂಕು ಮುಕ್ತವಾಗುವತ್ತ ಹೆಜ್ಜೆಯನ್ನಿಟ್ಟಿದೆ.
ಕಾಸರಗೋಡು ಜಿಲ್ಲೆಯಲ್ಲಿ ಅತಿಹೆಚ್ಚಿನ ಪ್ರಮಾಣದಲ್ಲಿ ಅನಿವಾಸಿ ಭಾರತೀಯರಿದ್ದರೂ, ಸರಿಯಾದ ದಿಕ್ಕಿನಲ್ಲಿ ಕ್ರಮ ಕೈಗೊಂಡ ಕಾರಣ ಕೊರೊನಾ ನಿಯಂತ್ರಣ ಸಾಧ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ ದೃಢಪಟ್ಟಿರುವ ಕೊರೊನಾ ಸೋಂಕು ಪೀಡಿತರಲ್ಲಿ ಶೇಕಡಾ 15.3 ಮಂದಿ ವಿದೇಶದಿಂದ ಬಂದವರಾಗಿದ್ದು, ಅವರೆಲ್ಲರನ್ನೂ ಪತ್ತೆಹಚ್ವಿ ಕ್ವಾರೆಂಟೈನ್ ಗೊಳಿಸಿದ ಕ್ರಮವೂ ಸೇರಿದಂತೆ ಕಾಸರಗೋಡಿನ ಆರೋಗ್ಯ ಇಲಾಖೆ, ಜಿಲ್ಲಾಡಳಿತ, ಪೊಲೀಸರ ಸೇವೆ ಪ್ರಶಂಸಾರ್ಹವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪೈಕಿ 15 ಮಂದಿ ಮಕ್ಕಳಿದ್ದು, ಅವರಲ್ಲಿ 8 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 114 ಮಂದಿ ಪುರುಷರಿಗೆ ಮತ್ತು 39 ಮಂದಿ ಮಹಿಳೆಯರಿಗೆ ಸೋಂಕು ತಗುಲಿದ್ದು, ಅದರಲ್ಲಿ 84 ಮಂದಿ ಪುರುಷರು ಮತ್ತು 23 ಮಂದಿ ಮಹಿಳೆಯರು ಗುಣಮುಖರಾಗಿದ್ದಾರೆ. ಮಹಿಳೆಯರಲ್ಲಿ 38 ಮಂದಿಗೆ ಸೋಂಕಿತರ ಸಂಪರ್ಕದಿಂದ ಕೊರೊನಾ ಬಾಧಿಸಿತ್ತು.
ಕೊರೋನಾ ನಿಯಂತ್ರಣಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳು
ಕೊರೊನಾ ಹಾಟ್ ಸ್ಪಾಟ್ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ವಿಶೇಷ ಅಧಿಕಾರಿಯ ನೇಮಕ.
ಬ್ರೇಕ್ ದಿ ಚೈನ್ ಅಭಿಯಾನದ ಮುಖಾಂತರ ಕೊರೊನಾ ಸೋಂಕು ತಡೆಯಲು ಕ್ರಮ.
ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಕಠಿಣ ಕ್ರಮ ಮತ್ತು ಜಿಲ್ಲಾಡಳಿತದಿಂದ ಮನೆ ಮನೆಗೆ ನಿತ್ಯೋಪಯೋಗಿ ಸಾಮಾಗ್ರಿಗಳ ಪೂರೈಕೆ.
ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಪ್ರತ್ಯೇಕ ಕೋವಿಡ್ ಆಸ್ಪತ್ರೆ. 17,3723 ಮಂದಿಗೆ ಮನೆಯಲ್ಲೇ ಕ್ಯಾರೆಂಟೈನ್.
ಸೋಂಕು ಬಾಧಿತರ ಸಂಪರ್ಕ ಪತ್ತೆ ಹಚ್ಚಲು ಜೀಯೋ ಸ್ಪೆಷಲ್ ಟ್ರಾಕಿಂಗ್.
ಕೊರೊನಾ ಸೋಂಕು ತಡೆಗಟ್ಟಲು ಎಲ್ಲಾ ರೀತಿಯಲ್ಲೂ ಕಠಿಣ ಕ್ರಮ ಕೈಗೊಂಡ ಜಿಲ್ಲಾಡಳಿತ ಮತ್ತು ಲಾಕ್ ಡೌನ್ ಆದೇಶ ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ.








