ಬೆಂಗಳೂರು: ” ಹಗಲು ಹೋಗಿದ್ದರೆ ಹೀಗೆ ಆಗ್ತಾ ಇರಲಿಲ್ಲ, ರಾತ್ರಿ ಹೋಗಿದ್ದಕ್ಕೇ ಹೀಗೆ ಆಗಿರೋದು” ಎಂದು ಪಾದರಾಯನಪುರದ ಘಟನೆಯನ್ನು ಸಮರ್ಥಿಸಿಕೊಂಡಿದ್ದ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಸಿಎಂ ಬಿಎಸ್ ಯಡಿಯೂರಪ್ಪ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇಂದು ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಾ ರಾತ್ರಿ ಅವರು ಪಾದರಾಯನ ಪುರಕ್ಕೆ ಹೋಗಬಾರದಿತ್ತು, ಹೋಗುವುದಕ್ಕಿಂತ ಮುಂಚೆ ಹೇಳಬೇಕಿತ್ತು ಅಂತಾ ಜಮೀರ್ ಹೇಳಿಕೆ ನೀಡಿದ್ದರ ಬಗ್ಗೆ ತೀವ್ರ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿದರು. ಅವರಿಗೇನ್ರಿ ಸಂಬಂಧ? ನಾವೆಲ್ಲಿ ಹೋಗಬೇಕು? ಏನು ಕ್ರಮ ಕೈಗೊಳ್ಳಬೇಕು? ಅಂತ ಸರ್ಕಾರ ಮಾಡೋ ಕೆಲಸಕ್ಕೆ ಯಾರದೋ ಅಪ್ಪಣೆ ಪಡೆದುಕೊಂಡು ಹೋಗ್ಬೇಕಾ? ಏನು ಸಂಬಂಧ ಅವರ್ಗೂ ಇದಕ್ಕೂ.. ಈ ರೀತಿ ಹೇಳಿಕೆ ಕೊಡೋದಕ್ಕೆ? ಅಂದ್ರೆ ಅವರೇ ಇದಕ್ಕೆಲ್ಲ ಪ್ರಚೋದನೆ ಕೊಡ್ತಿದ್ದಾರೆ ಅಂತಾ ಭಾವಿಸಬೇಕಾ? ಎಂದು ಗುಡುಗಿದರು.
ಅಲ್ಲದೆ ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಹೇಳಬೇಕಿದ್ದ ವ್ಯಕ್ತಿ ಈ ರೀತಿ ಹೇಳಿಕೆ ಕೊಡ್ತಿದ್ದಾರೆ ಅಂದ್ರೆ ಇದು ಬೇಜವಾಬ್ದಾರಿಯ ಪರಮಾವಧಿ ಅಂತ ಹರಿಹಾಯ್ದಿದ್ದಾರೆ.