ಮ್ಯಾನ್ಮಾರ್ – ಆಂಗ್ ಸಾನ್ ಸೂಕಿ ವಿರುದ್ಧದ ಪ್ರಕರಣಗಳ ವಿಚಾರಣೆ 14ರಿಂದ ಆರಂಭ..!
ಮ್ಯಾನ್ಮಾರ್: ಸದ್ಯ ಮ್ಯಾನ್ಮಾರ್ ನಲ್ಲಿ ಮಿಲಿಟರಿ ಅಧಿಪತ್ಯ ಸಾಧಿಸಿದ್ದು, ಪದಚ್ಯುತಗೊಂಡಿರುವ ನಾಯಕಿ ಆಂಗ್ ಸಾನ್ ಸೂ ಕಿ ಅವರ ವಿರುದ್ಧದ ಪ್ರಕರಣಗಳ ವಿಚಾರಣೆಯನ್ನು ಮಿಲಿಟರಿ ಆಡಳಿತವು ಜೂ. 14 ರಿಂದ ಆರಂಭಿಸಲಿದೆ. ಈ ಬಗ್ಗೆ ಸೂಕಿ ಪರ ವಕೀಲರ ತಂಡದ ಹಿರಿಯ ಸದಸ್ಯ ಖಿನ್ ಮೌಂಗ್ ಝಾ ಮಾಹಿತಿ ನೀಡಿದ್ದಾರೆ. ಜೂನ್ 28ರ ವರೆಗೆ ಮಿಲಿಟರಿ ಸರ್ಕಾರ ತನ್ನ ವಾದ ಮಂಡನೆ ಮಾಡಲಿದೆ. ನಂತರ ಜುಲೈ 26ರ ವರೆಗೆ ಸೂಕಿ ಪರ ವಾದ ಮಂಡನೆಗೆ ಅವಕಾಶ ಇರಲಿದೆ.
ಸೂಕಿ ನೇತೃತ್ವದ ಚುನಾಯಿತ ಸರ್ಕಾರವನ್ನು ಮ್ಯಾನ್ಮಾರ್ ಮಿಲಿಟರಿ ಫೆಬ್ರುವರಿಯಲ್ಲಿ ಪದಚ್ಯುತಗೊಳಿಸಿದೆ. ದಂಗೆಗೆ ಪ್ರಚೋದಿಸುವಂಥ ಮಾಹಿತಿಯನ್ನು ಪ್ರಸಾರ ಮಾಡಿರುವುದು, ಕಳೆದ ವರ್ಷ ನಡೆದ ಚುನಾವಣೆ ಸಂದರ್ಭದಲ್ಲಿ ಕೋವಿಡ್–19 ಪಿಡುಗಿನ ಕಾರಣ ಜಾರಿಗೊಳಿಸಿದ್ದ ನಿರ್ಬಂಧಗಳ ಉಲ್ಲಂಘನೆ, ತಮ್ಮ ಅಂಗರಕ್ಷಕರು ಬಳಸಲು ವಾಕಿ–ಟಾಕಿ ಸಾಧನಗಳನ್ನು ಅಕ್ರಮವಾಗಿ ಆಮದು ಮಾಡಿಕೊಂಡಿರುವುದು ಹಾಗೂ ಪರವಾನಗಿ ಇಲ್ಲದೇ ರೇಡಿಯೊ ಬಳಸಿದ ಆರೋಪಗಳನ್ನು ಸೂಕಿ ಅವರ ವಿರುದ್ಧ ಹೊರಿಸಿ ಚುನಾಯಿತ ಸರ್ಕಾರವನ್ನು ಕಡೆವಿ ಮಿಲಿಟರಿ ಸರ್ಕಾರ ಅಧಿಪತ್ಯ ಸಾಧಿಸಿದೆ.
ಆದ್ರೆ ಮಿಲಿಟರಿ ಸರ್ಕಾರದ ನಡೆಯನ್ನ ಖಂಡಿಸಿ ಪ್ರಜಾಪ್ರಭುತ್ವ ಮರುಸ್ಥಾಪನೆಗಾಗಿ ಹಿಂಸಾಚಾರ ಭುಗಿಲೆದ್ದಿದ್ದು, ಜನರು ಬೀದಿಗಿಳಿದು ಹೋರಾಟ ಮಾಡಿದರು.. ಈ ರೀತಿಯಾಗಿ ಪ್ರತಿಭಟನೆ ನಡೆಸಿದ ನೂರಾರು ಜನರನ್ನ ಮಿಲಿಟರಿ ಪಡೆ ಬಲಿ ಪಡೆದುಕೊಂಡಿದೆ.