ಫ್ರೆಂಚ್ ಓಪನ್ 2021 – ಸೆಮಿಫೈನಲ್ ಗೆ ಎಂಟ್ರಿಯಾದ ಅನಾಸ್ಟೆಸಿಯಾ, ತಮಾರ
ಫ್ರೆಂಚ್ ಓಪನ್ 2021ರ ಮಹಿಳೆಯರ ಸಿಂಗಲ್ಸ್ ನಲ್ಲಿ ರಷ್ಯಾದ ಅನಾಸ್ಟೆಸಿಯಾ ಪಾವ್ಲಾಚೆಂಕೊವಾ ಮತ್ತು ತಮಾರ ಜಿಡಾಂಸೆಕ್ ಅವರು ಮೊದಲ ಸೆಮಿಫೈನಲ್ ನಲ್ಲಿ ಕಾದಾಟ ನಡೆಸಲಿದ್ದಾರೆ.
ಮಹಿಳೆಯ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಅನಾಸ್ಟೆಸಿಯಾ ಪಾವ್ಲಾಚೆಂಕೊವಾ 6-7, 6-2, 9-7ರಿಂದ ಕಝಕಿಸ್ತಾನದ ಎಲೆನಾ ರೆಬಾಕಿನಾ ವಿರುದ್ಧ ಪ್ರಯಾಸದ ಜಯ ಸಾಧಿಸಿದ್ದಾರೆ. ನಾಲ್ಕು ಪ್ರತಿಷ್ಠಿತ ಗ್ರ್ಯಾಂಡ್ ಸ್ಲಾಂ ಟೂರ್ನಿಗಳಲ್ಲಿ ಅನಾಸ್ಟೆಸಿಯಾ ಪಾವ್ಲಾಚೆಂಕೊವಾ ಅವರು ಆರು ಬಾರಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲು ಅನುಭವಿಸಿದ್ದರು. ಆದ್ರೆ ಈ ಬಾರಿ ಜಿದ್ದಿಗೆ ಬಿದ್ದು ಹೋರಾಟ ನಡೆಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದ್ದಾರೆ.
ಮಹಿಳೆಯರ ಇನ್ನೊಂದು ಸಿಂಗಲ್ಸ್ ನಲ್ಲಿ ಶ್ರೇಯಾಂಕ ರಹಿತೆ ಸ್ಲೋವೆನಿಯಾದ ತಮಾರ ಝಿಡೆಂಸೆಕ್ ಅವರು 7-5, 4-6, 8-6ರಿಂದ ಸ್ಪೇನ್ ನ ಪೌಲಾ ಬಡೊಸಾ ವಿರುದ್ಧ ಜಯ ಸಾಧಿಸಿದ್ರು. ಈ ಮೂಲಕ ತಮಾರ ಅವರು ಸ್ಲೋವಾಕಿಯಾ ಪರ ಸೆಮಿಫೈನಲ್ ಪ್ರವೇಶಿಸಿದ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಇನ್ನುಳಿದ ಎರಡು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಐಗಾ ಸ್ವಿಟೆಕ್ ಮತ್ತು ಮರಿಯಾ ಸಕಾರಿ ಹಾಗೂ ಅಮೆರಿಕಾದ ಯುವ ಆಟಗಾರ್ತಿ ಕೊಕೊ ಗೌಫ್ ಮತ್ತು ಬಾರ್ಬೊರಾ ಕ್ರೆಜೊಕೊವಾ ನಡುವೆ ಹೋರಾಟ ನಡೆಯಲಿದೆ.