ಅಚ್ಛೇ ದಿನ್ ಭರವಸೆ ನೀಡಿ.. ಈಗ ತಿಗಣೆಯಂತೆ ರಕ್ತ ಹೀರುತ್ತಿದ್ದಾರೆ : ಸಿದ್ದರಾಮಯ್ಯ
ಬೆಂಗಳೂರು : ಈ ಹಿಂದೆ ಯುಪಿಎ ಅವಧಿಯಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಮೋದಿಯವರು ಧರಣಿ ನಡೆಸಿದ್ದರು. ಈಗ ಅವರೇ ದರ ಏರಿಕೆ ಮಾಡಿದ್ದಾರೆ.
ದೇಶದ ಜನತೆಗೆ ಅಚ್ಛೇ ದಿನ್ ಭರವಸೆ ನೀಡಿ ಅಧಿಕಾರಕ್ಕೆ ಬಂದು ಈಗ ತಿಗಣೆಗಳ ತರಹ ಜನರ ರಕ್ತ ಹೀರುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ದೇಶದಲ್ಲಿ ತೈಲೆ ಬೆಲೆ ಏರಿಕೆ ಖಂಡಿಸಿ ಇಂದು ರಾಜ್ಯ ಕಾಂಗ್ರೆಸ್ ನಾಯಕರು ನಗರದ ಶಿವಾನಂದ ಸರ್ಕಲ್ ಬಳಿಯ ಪೆಟ್ರೋಲ್ ಬಂಕ್ ಎದುರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ದೇಶದ ಜನರಿಗೆ ಅಚ್ಛೇ ದಿನ್ ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಏರಿದ ಪ್ರಧಾನಿ ಮೋದಿ ಇಂದು ಜನರಿಗೆ ನರಕ ಎಂದರೇನು ಎಂಬುದನ್ನು ತೋರಿಸುತ್ತಿದ್ದಾರೆ.
ಪೆಟ್ರೋಲ್, ಡೀಸೆಲ್, ಅನಿಲ ದರ ಸೇರಿದಂತೆ ಅಗತ್ಯ ವಸ್ತುಗಳ ದರವನ್ನು ಏರಿಕೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ದರ 100 ರೂಪಾಯಿ ಗಡಿ ದಾಟಿದೆ.
ತೈಲ ದರ ಏರಿಕೆಯಾದರೆ ಎಲ್ಲಾ ವಸ್ತುಗಳ ದರ ಏರಿಕೆಯಾಗುತ್ತೆ. ಸಾಮಾನ್ಯ ಜನ ಜೀವನ ಮಾಡುವುದಾದರು ಹೇಗೆ? ಎಂದು ಪ್ರಶ್ನಿಸಿದರು.
ಇನ್ನು ಈ ಹಿಂದೆ ಯುಪಿಎ ಅವಧಿಯಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ಮೋದಿಯವರು ಧರಣಿ ನಡೆಸಿದ್ದರು. ಈಗ ಅವರೇ ದರ ಏರಿಕೆ ಮಾಡಿದ್ದಾರೆ.
ದೇಶದ ಜನತೆಗೆ ಅಚ್ಛೇ ದಿನ್ ಭರವಸೆ ನೀಡಿ ಅಧಿಕಾರಕ್ಕೆ ಬಂದು ಈಗ ತಿಗಣೆಗಳ ತರಹ ಜನರ ರಕ್ತ ಹೀರುತ್ತಿದ್ದಾರೆ. ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿಗೆ ನಾಚಿಕೆಯಾಗಬೇಕು ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.