“ನಾಯಕತ್ವ ಬದಲಾವಣೆ ಎಂದರೆ ಕೊರೊನಾಗಿಂತಲೂ ದೊಡ್ಡ ಅನಾಹುತ”
ಶಿವಮೊಗ್ಗ : ನಾಯಕತ್ವ ಬದಲಾವಣೆ ಎಂದರೆ ಕೊರೊನಾಗಿಂತಲೂ ದೊಡ್ಡ ಅನಾಹುತ ಸಂಭವಿಸುತ್ತದೆ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಯಡಿಯೂರಪ್ಪ ಪರ ಮಾತನಾಡಿದ್ದಾರೆ.
ಆ ಮೂಲಕ ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಮಠಾಧೀಶರು ಬಿ.ಎಸ್.ಯಡಿಯೂರಪ್ಪ ಬೆಂಬಲಕ್ಕೆ ನಿಂತಿದ್ದಾರೆ.
ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರ ತಾಲೂಕು ಕಾಳೇನಹಳ್ಳಿ ಶಿವಯೋಗಾಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಈ ವೇಳೆ ಮಲೆನಾಡು ಮಠಾಧೀಶರ ಪರಿಷತ್ ಮುಖಂಡರು ಯಡಿಯೂರಪ್ಪ ಅವರನ್ನ ಭೇಟಿಯಾದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಯಾವುದೇ ಕಾರಣಕ್ಕೂ ನಾಯಕತ್ವ ಬದಲಾವಣೆಯ ವಿಷಯವೇ ಬರಬಾರದು. ನಾಯಕತ್ವ ಬದಲಾವಣೆ ಎಂದರೆ ಕೊರೊನಾಗಿಂತಲೂ ದೊಡ್ಡ ಅನಾಹುತ ಸಂಭವಿಸುತ್ತದೆ.
ಯಡಿಯೂರಪ್ಪ ಅವರ ನಾಯಕತ್ವಕ್ಕೆ ಅಡೆತಡೆ ತರುವ ಕೆಲಸವನ್ನು ಯಾರೂ ಮಾಡಬಾರದು. ಒಂದು ವೇಳೆ ಈ ಕೆಲಸ ಮಾಡಿದರೆ ಅದು ತಮ್ಮ ತಲೆ ಮೇಲೆ ತಾವೇ ಕಲ್ಲುಹಾಕಿಕೊಂಡಂತೆ ಎಂದು ಅಭಿಪ್ರಾಯಪಟ್ಟರು.